ಬೆಂಗಳೂರು, ಮೇ 25 (Daijiworld News/MB) : ಕಲ್ಲಡ್ಕದ ಯುವಕ ನಿಶಾಂತ್ ಎಂಬುವವರ ಸಾವಿನ ಕುರಿತಾಗಿ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸುದ್ದಿಯ ಬಗ್ಗೆ ತೀವ್ರ ಆಕೋಶ್ರಗೊಂಡಿರುವ ಸಂಸದೆ ಶೋಭಾ ಕರಂದ್ಲಾಜೆ, "ಜಿಹಾದಿಗಳು ಮತ್ತೊಂದು ಷಡ್ಯಂತ್ರ ಮಾಡಿದ್ದು ನನ್ನ ಹೆಸರಲ್ಲಿ ಸುಳ್ಳು ಪೋಸ್ಟ್ ಮಾಡಿದ್ದಾರೆ" ಎಂದು ಹೇಳಿದ್ದಾರೆ.
ಈ ಬಗ್ಗೆ ವಿಡಿಯೋ ಮೂಲಕ ಸ್ಪಷ್ಟನೆ ನೀಡಿರುವ ಅವರು, "ಕಲ್ಲಡ್ಕದ ನಿಶಾಂತ್ ಎಂಬ ಯುವಕ ಸಾವನ್ನಪ್ಪಿದ್ದು ಅದು ಜಿಹಾದಿಗಳಿಂದ ಆದ ತೊಂದರೆಯೆಂದು ನಾನು ಹೇಳಿದಂತಹ ಪೋಸ್ಟ್ ಮಾಡಿದ್ದಾರೆ. ಇದ್ದೆಲ್ಲವೂ ಕೂಡಾ ಸುಳ್ಳು ಸುದ್ದಿ, ನಾನು ಯಾವುದೇ ರೀತಿಯ ಹೇಳಿಕೆಯಾಗಲಿ ಪೋಸ್ಟ್ ಆಗಲಿ ಸಾಮಾಜಿಕ ಜಾಲತಾಣದಲ್ಲಿ ಮಾಡಿಲ್ಲ ಹಾಗೂ ಮಾಧ್ಯಮಕ್ಕೂ ಹೇಳಿಕೆ ನೀಡಿಲ್ಲ. ಇಂತಹ ಸುಳ್ಳು ಸುದ್ದಿ ಹಬ್ಬಿಸುವವರ ಮೇಲೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ನಾನು ಮಂಗಳೂರಿನ ಪೊಲೀಸ್ ಆಯುಕ್ತರಲ್ಲಿ ವಿನಂತಿಸುತ್ತೇನೆ. ಇಂತಹ ಸುಳ್ಳು ಪೋಸ್ಟರ್ಗಳನ್ನು ಮಾಡಿ ಸುಳ್ಳು ಸುದ್ದಿ ಹಬ್ಬಿಸಿದವರನ್ನು ತಕ್ಷಣ ಬಂಧನ ಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇನೆ" ಎಂದು ತಿಳಿಸಿದ್ದಾರೆ.
ಹಾಗೆಯೇ, "ನಾನು ಈ ರೀತಿಯ ಯಾವುದೇ ಹೇಳಿಕೆ ಅಥವಾ ಟ್ವೀಟ್ ಮಾಡಿರುವುದಿಲ್ಲ, ಎಡಿಟೆಡ್ ಟ್ವೀಟನ್ನು ನನ್ನದೆಂದು ಬಿಂಬಿಸಲು ಪ್ರಯತ್ನಿಸಿರುತ್ತಾರೆ. ಕಿಡಿಗೇಡಿಗಳ ಈ ಕೃತ್ಯಕ್ಕೆ ಸಾಥ್ ನೀಡುವ & ಸಾರ್ವಜನಿಕ ವಲಯದಲ್ಲಿ ವದಂತಿಗಳ ಮೂಲಕ ಸಾಮರಸ್ಯ-ಶಾಂತಿ ಕದಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಠಿಣ ಕ್ರಮ ಕೈಗೊಳ್ಳುವಂತೆ ಮಂಗಳೂರು ಆಯುಕ್ತರಿಗೆ ಸೂಚಿಸಲಾಗಿದೆ" ಎಂದು ಹೇಳಿದ್ದಾರೆ.
"ನನ್ನ ಹೆಸರಿನಲ್ಲಿ ಸುಳ್ಳು ಸುದ್ದಿಯನ್ನು ಹಬ್ಬಿಸಿ, ಸಮಾಜದ ಶಾಂತಿ ಕದಡಲು ಯತ್ನಿಸುತ್ತಿರುವ ಕಿಡಿಗೇಡಿಗಳನ್ನು ತಕ್ಷಣ ಬಂಧಿಸಿ, ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸ್ ವರಿಷ್ಟರಲ್ಲಿ ಆಗ್ರಹ ಮಾಡಿರುತ್ತೇನೆ. ಮತಾಂಧ ಜಿಹಾದಿಗಳ ಈ ದುಷ್ಕೃತ್ಯಕ್ಕೆ ಕಾಂಗ್ರೆಸ್ ನಾಯಕರು ಸೇರಿಕೊಂಡಿರುವುದು ಅವರ ವಿಕೃತ ಮನಸ್ಥಿತಿಯನ್ನು ತೆರೆದಿಡುತ್ತದೆ" ಎಂದು ಹೇಳಿದ್ದಾರೆ.
ಏನಿದು ನಿಶಾಂತ್ ಸಾವಿನ ಸುದ್ದಿ?
ಕಲ್ಲಡ್ಕದ ನಿಶಾಂತ್ ಎಂಬ ಯುವಕ ಪಾಣೆಮಂಗಳೂರು ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದು ಆ ಕೂಡಲೇ ಶಮೀರ್ ಮುಹಮ್ಮದ್ ಮೊಮ್ಮು ತೌಸೀಫ್ ಝಾಹಿದ್ ಜಾಯಿ ಅಕ್ಕರಂಗಡಿಯ ಮುಕ್ತಾರ್, ಆರಿಫ್ ಹೈವೇ ಎಂಬವರು ನದಿಗೆ ಹಾರಿ ಆತನನ್ನು ರಕ್ಷಿಸಿ ಆಸ್ಪತ್ರೆಗೆ ಕೊಂಡೊಯ್ದಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಯುವಕ ಸಾವನ್ನಪ್ಪಿದ್ದಾನೆ.
ಆ ಬಳಿಕ "ಜಿಹಾದಿಗಳಿಂದ ಹಿಂದೂ ಸಂಘಟನೆಯ ಕಲ್ಲಡ್ಕದ ನಿಶಾಂತ್ ಎಂಬ ಯುವಕನ ಹತ್ಯೆ ನಡೆದಿದೆ ಎಂಬ ಮಾಹಿತಿ ಬಂದಿದೆ. ಕೂಡಲೇ ಆ ಜಿಹಾದಿಗಳ ಮೇಲೆ ಕ್ರಮ ಕೈಗೊಳ್ಳಬೇಕೆಂದು ಅಮಿತ್ ಶಾರಿಗೆ ತಿಳಿಸಿದ್ದೇನೆ" ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿರುವಂತೆ ಟ್ವೀಟ್ನ ಸ್ಕ್ರೀನ್ಶಾಟ್ವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಂಸದೆ ಶೋಭಾ ಕರಂದ್ಲಾಜೆ ಅವರು "ನಾನು ಈ ರೀತಿಯ ಯಾವುದೇ ಹೇಳಿಕೆ ಅಥವಾ ಟ್ವೀಟ್ ಮಾಡಿರುವುದಿಲ್ಲ, ಎಡಿಟೆಡ್ ಟ್ವೀಟನ್ನು ನನ್ನದೆಂದು ಬಿಂಬಿಸಲು ಪ್ರಯತ್ನಿಸಿರುತ್ತಾರೆ" ಎಂದು ತಿಳಿಸಿದ್ದಾರೆ.