ಕಾಸರಗೋಡು, ಮೇ 25 (Daijiworld News/MB) : ಕೊರೊನಾ ಅವಧಿಯಲ್ಲಿ ಪರೀಕ್ಷೆ ನಡೆಸಲು ಸಿದ್ಧವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಸಜ್ಜುಗೊಂಡಿದೆ. ಮೇ 26ರಿಂದ ಎಸ್.ಎಸ್.ಸಲ್.ಸಿ. ಹೈಯರ್ ಸೆಕೆಂಡರಿ ಪರೀಕ್ಷೆಗಳು ಆರಂಭಗೊಳ್ಳಲಿದ್ದು, ಜಿಲ್ಲೆಯಲ್ಲಿ ಸಿದ್ಧತೆಗಳು ಪೂರ್ಣಗೊಂಡಿವೆ.
ಜಿಲ್ಲೆಯಲ್ಲಿ ಈ ಬಾರಿ 53,344 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಜಿಲ್ಲೆಯ 153 ಕೇಂದ್ರಗಳಲ್ಲಿ 19630 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗಲಿದ್ದಾರೆ. 106 ಕೇಂದ್ರಗಳಲ್ಲಿ 16677 ಪ್ಲಸ್ ವನ್, 17037 ಪ್ಲಸ್ ಟು ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ಹಾಜರಾಗಲಿದ್ದಾರೆ. 22 ಕೇಂದ್ರಗಳಲ್ಲಿ 3 ಸಾವಿರ ವಿದ್ಯಾರ್ಥಿಗಳು ವಿ.ಎಚ್.ಎಸ್.ಸಿ. ಪರೀಕ್ಷೆಗೆ ಹಾಜರಾಗುವರು.
ಇದೇ ವೇಳೆ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗಬೇಕಿರುವ 297 ಮಂದಿ ವಿದ್ಯಾರ್ಥಿಗಳು ಲಾಕ್ ಡೌನ್ ಕಾರಣದಿಂದ ಕರ್ನಾಟಕದ ವಿವಿಧೆಡೆ ಸಿಲುಕಿಕೊಂಡಿದ್ದು, ಇವರಲ್ಲಿ 33 ಮಂದಿ ಸ್ವಯಂ ಪರೀಕ್ಷೆಗೆ ಹಾಜರಾಗುವುದಾಗಿ ಈಗಾಗಲೇ ತಿಳಿಸಿದ್ದಾರೆ. ಉಳಿದಂತೆ 264 ಮಂದಿ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗಬೇಕಾದ ವಿದ್ಯಾರ್ಥಿಗಳು, 204 ಮಂದಿ ಹೈಯರ್ ಸೆಕೆಂಡರಿ ಪರೀಕ್ಷೆಗೆ ಹಾಜರಾಗಬೇಕಾದ ವಿದ್ಯಾರ್ಥಿಗಳು ಕರ್ನಾಟಕದಲ್ಲಿದ್ದಾರೆ.
ಜಿಲ್ಲೆಯ ಯಾವುದೇ ಪ್ರದೇಶಗಳಲ್ಲೂ ಪರೀಕ್ಷೆಯ ಕೇಂದ್ರಗಳಲ್ಲಿ ಬದಲಾವಣೆಯಿಲ್ಲ. ಹಾಟ್ಸ್ಪಾಟ್ಗಳಾಗಿರುವ ಗ್ರಾಮಪಂಚಾಯತ್ ಗಳ, ನಗರಸಭೆಗಳ ಪರೀಕ್ಷಾ ಕೇಂದ್ರಗಳಲ್ಲೇ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಬಹುದು. ಆದರೆ ಕಂಟೈನ್ಮೆಂಟ್ ಝೋನ್ಗಳಿಂದ ಬರುವ ವಿದ್ಯಾರ್ಥಿಗಳನ್ನು ಪ್ರತ್ಯೇಕ ಕೊಠಡಿಗಳಲ್ಲಿ ಪರೀಕ್ಷೆ ಬರೆಯಲು ಸೌಲಭ್ಯ ಏರ್ಪಡಿಸಲಾಗುವುದು. ಇದಕ್ಕಿರುವ ಸಿದ್ಧತೆ ಭರದಿಂದ ನಡೆಯುತ್ತಿದೆ.
ಪರೀಕ್ಷಾ ಕೇಂದ್ರಗಳಿರುವ ಶಾಲೆಗಳಿಗೆ ಪ್ರಯಾಣ ನಡೆಸುವ ಸಂಬಂಧ ಮಂಜೂರಾತಿಗಾಗಿ ಕೋವಿಡ್ 19 ಜಾಗ್ರತಾ ಪೋರ್ಟಲ್ ನಲ್ಲಿ ನೋಂದಣಿ ನಡೆಸಿರುವ ವಿದ್ಯಾರ್ಥಿಗಳು ಉಪಜಿಲ್ಲಾಧಿಕಾರಿ ಮಂಜೂರು ಮಾಡಿರುವ ಪಾಸ್ ಸಹಿತ ಇಂದು (ಮೇ 25) ಬೆಳಗ್ಗೆ 10 ಗಂಟೆಗೆ ಮುಂಚಿತವಾಗಿ ತಲಪ್ಪಾಡಿ ಗಡಿ ಚೆಕ್ ಪೋಸ್ಟ್ ಗೆ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದ್ದು ಇವರನ್ನು ಜಿಲ್ಲಾಡಳಿತೆ ಏರ್ಪಡಿಸಿರು ಪ್ರತ್ಯೇಕ ಕೆ.ಎಸ್.ಆರ್.ಟಿ.ಸಿ.ಬಸ್ಸುಗಳಲ್ಲಿ ಆಯಾ ಕೇಂದ್ರಗಳಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.
ಒಂದು ಬಸ್ ನಲ್ಲಿ ತಲಾ 30 ವಿದ್ಯಾರ್ಥಿಗಳು ಎಂಬಂತೆ ಕೆ.ಎಸ್.ಆರ್.ಟಿ.ಸಿ. ಬಸ್ ಗಳು ಸಂಚಾರ ನಡೆಸಲಿವೆ. ಪರೀಕ್ಷೆ ಮುಗಿಯುವ ವರೆಗೆ ಈ ವಿದ್ಯಾರ್ಥಿಗಳ ವಸತಿ, ಭೋಜನ ಇತ್ಯಾದಿ ಪೂರ್ಣ ಹೊಣೆ ಆಯಾ ಶಾಲೆಗಳದೇ ಆಗಿರುತ್ತದೆ. ಜೊತೆಗೆ ಈ ಮಕ್ಕಳು ಗ್ರಾಮಪಂಚಾಯತ್ ಕಾರ್ಯದರ್ಶಿ ಮತ್ತು ಆರೋಗ್ಯ ಕೇಂದ್ರದಲ್ಲೂ ಹಾಜರಾಗಬೇಕು. ಶಾಲೆಗಳಿಗೆ ತಲಪುವ ವಿದ್ಯಾರ್ಥಿಗಳು ಕೋವಿಡ್ 19 ಜಾಗ್ರತಾ ಕಟ್ಟುನಿಟ್ಟುಗಳ ಪ್ರಕಾರ ಪರೀಕ್ಷೆ ಬರೆಯಲು, ಸ್ಯಾನಿಟೈಸರ್ ಬಲಸಲು, ಸಮಾಜಿಕ ಅಂತರ ಪಾಲಿಸಲು ಆದೇಶ ಆಯಾ ಕೇಂದ್ರಗಳಿಗೆ ತಲಪಿಸಲಾಗಿದೆ ಎಂದು ಜಿಲ್ಲಾ ಶಿಕ್ಷಣ ಉಪನಿರ್ದೇಶಕಿ ಕೆ.ವಿ.ಪುಷ್ಪಾ ತಿಳಿಸಿದರು. ಪರೀಕ್ಷೆ ಮುಗಿದ ನಂತರವೂ ಆರೋಗ್ಯ ಇಲಾಖೆಯ ಆದೇಶ ಪ್ರಕಾರ 14 ದಿನಗಳ ಕ್ವಾರೆಂಟೈನ್ ಪೂರ್ಣಗೊಳಿಸಬೇಕಿದೆ.
ಈ ಪರೀಕ್ಷೆಗಳಿಗಾಗಿ ಜಿಲ್ಲೆಯ ಶಾಲೆಗಳು ಸಿದ್ಧಗೊಂಡಿವೆ. ಈ ಬಾರಿಯ ಸಿದ್ಧತೆಗಳು ಪ್ರತಿ ಪ್ರದೇಶದ ಜನತೆಯ ಒಗ್ಗಟ್ಟಿನ ಯಶಸ್ಸಿನ ಫಲವಾಗಿವ. ಸ್ಥಳೀಯಾಡಳಿತ ಸಂಸ್ಥೆಗಳು, ಶಾಲೆಯ ಸಿಬ್ಬಂದಿ, ಶಿಕ್ಷಕರು, ಸ್ವಯಂ ಸೇವಾ ಸಂಘಟನೆಗಳು, ಜನಪ್ರತಿನಿಧಿಗಳು, ಹಳೆ ವಿದ್ಯಾರ್ಥಿಗಳು ಮೊದಲಾವರು ಸಿದ್ಧತೆಗೆ ಹೆಗಲು ನೀಡಿದ್ದಾರೆ. ಶುಚೀಕರಣ, ಪರೀಕ್ಷಾ ಕೊಠಡಿಯ ಪೀಠೋಪಕರಣಗಳ ಸಜ್ಜು ಸಹಿತ ಕಾಯಕಗಳು ಅವರ ಸಹಕಾರದೊಂದಿಗೆ ನಡೆದಿದೆ. ಕರ್ನಾಟಕದಿಂದ ಪಾಸ್ ಸಹಿತ ಆಗಮಿಸುವಮಕ್ಕಳಿಗೆ ಬೇಕಾದ ಸೌಲಭ್ಯಗಳನ್ನೂ ಶಾಲೆಗಳಲ್ಲಿ ಒದಗಿಸಲಾಗುವುದು.
ಸಿದ್ಧತೆಗಳ ಅಂಗವಾಗಿ ಆಯಾ ಪರೀಕ್ಷಾ ಕೇಂರಗಳಿರುವ ಶಾಲೆಗಳನ್ನು ರೋಗಾಣುಮುಕ್ತವಾಗಿಸುವ ಕಾಯಕ ನಡೆದಿದೆ. ಜಿಲ್ಲೆಯ ಎಲ್ಲ ಶಾಲೆಗಳನ್ನೂ ಈ ನಿಟ್ಟಿನಲ್ಲಿ ಶುಚಿಗೊಳಿಸಲಾಗಿದೆ. ಅಗನಿಶಾಮಕದಳ ಮತ್ತು ಸಿವಿಲ್ ಡಿಫೆನ್ಸ್ ಫೋರ್ಸ್ ಜಂಟಿಯಾಗಿ ಈ ಕಾಯಕ ನಡೆಸಿವೆ. ಈ ಮೂಲಕ ಕೊರೋನಾ ಪ್ರತಿರೋಧ ಚಟುವಟಿಕೆಗಳ ಸಹಿತದ ಪರೀಕ್ಷಾ ಅವಧಿಯ ಸಿದ್ಧತೆಗಳು ಪೂರ್ಣಗೊಂಡಿವೆ. ಮೊದಲ ಹಂತದಲ್ಲಿ ಕೋವಿಡ್ ಪ್ರತಿರೋಧ ಚಟುವಟಿಕೆಗಳು, ಶಿಬಿರಗಳು ಇತ್ಯಾದಿ ನಡೆದ ಶಾಲೆಗಳಲ್ಲಿ ಸೋಡಿಯಂ ಹೈಪೋ ಕ್ಲಾರೈಡ್ ಮಿಶ್ರಣ ಬಳಸಿ ಪೂರ್ಣ ಪ್ರಮಾಣದ ರೋಗಾಣುಮುಕ್ತ ಔಷಧಿ ಸಿಂಪಡಿಸಲಾಗಿದೆ.