ಉಪ್ಪಿನಂಗಡಿ, ಮಾ 22 : ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರ ವಿರೂಪಗೊಳಿಸಿ ವಾಟ್ಸಪ್ ಗ್ರೂಪ್ ನಲ್ಲಿ ಹರಿಯಬಿಟ್ಟಿರುವ ಹಿನ್ನಲೆಯಲ್ಲಿ ಈಗ ವಾಟ್ಸಪ್ ಗ್ರೂಪ್ ವಿರುದ್ಧ ದೂರು ದಾಖಲಾಗಿದೆ. ಫ್ರೆಂಡ್ಸ್ ಪಡುಬೆಟ್ಟು ಎಂಬ ಗ್ರೂಪ್ ನಲ್ಲಿ ಪ್ರಧಾನಿ ಮೋದಿ ಅವರ ಮುಖವನ್ನು ಹಂದಿಯ ಮುಖದಂತೆ ಚಿತ್ರಿಸಿ ಹಂಚಿಕೊಂಡಿದ್ದಾರೆ. ಹೀಗಾಗಿ ಗ್ರೂಪ್ ಅಡ್ಮಿನ್ ಹಾಗೂ ಓರ್ವ ಸದಸ್ಯನ ವಿರುದ್ಧ ದೂರು ದಾಖಲಾಗಿದೆ. ನೆಲ್ಯಾಡಿಯ ಪ್ರಕಾಶ್ ಎಂಬವರು ಉಪ್ಪಿನಂಗಡಿ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಿಸಿದ್ದಾರೆ.
ಫ್ರೆಂಡ್ಸ್ ಪಡುಬೆಟ್ಟು ವಾಟ್ಸಪ್ ಗ್ರೂಪ್ ನ ಅಡ್ಮಿನ್ ಮತ್ತು ಗ್ರೂಪ್ ನ ಸದಸ್ಯನೊಬ್ಬ ದೇಶದ ಘನತೆವೆತ್ತ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋವನ್ನು ತಿರುಚಿ ಹಂದಿಯ ಮುಖದಂತೆ ಬದಲಾಯಿಸಿ ವಾಟ್ಸಪ್ ಗ್ರೂಪಿನಲ್ಲಿ ದಿನಾಂಕ 20ರಂದು ಮಧ್ಯಾಹ್ನ ಸುಮಾರು 2 ಗಂಟೆಗೆ ಹಾಕಿದ್ದಾರೆ. ಇದರಿಂದ ನಮ್ಮ ಪ್ರಧಾನಿಯ ಘನತೆಗೆ ಧಕ್ಕೆ ಉಂಟಾಗಿದೆ. ಆದ್ದರಿಂದ ಈ ಬಗ್ಗೆ ಈ ಇಬ್ಬರನ್ನು ಕರೆಸಿ ವಿಚಾರಣೆ ನಡೆಸಿ ನ್ಯಾಯ ಒದಗಿಸಬೇಕೆಂದು ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.