ಉಡುಪಿ, ಮೇ 25 (DaijiworldNews/PY) : ದೇಶದಲ್ಲಿ ಲಾಕ್ಡೌನ್ ಸಡಿಲವಾದ ಬಳಿಕ ಹಲವು ಚಟುವಟಿಕೆಗಳು ಪ್ರಾರಂಭವಾಗಿವೆ. ಪ್ರತಿನಿತ್ಯ ಕೆಲಸಗಳಿಗೆ ತೆರಳುತ್ತಿರುವ ಜನಸಾಮಾನ್ಯರಿಗೆ ಸಹಾಯವಾಗುವ ಹಾಗೂ ಅವರ ಆರೋಗ್ಯದ ದೃಷ್ಠಿಯಿಂದ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಶಾಸಕ ಕೆ. ರಘುಪತಿ ಭಟ್ ಅವರ ನೇತೃತ್ವದಲ್ಲಿ ಕೈಗೊಂಡಿರುವ ಉಚಿತ ಬಸ್ಸಿನ ವ್ಯವಸ್ಥೆ ರಾಜ್ಯಕ್ಕೆ ಹೊಸ ಪ್ರಯೋಗವಾಗಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.
ಉಡುಪಿ ವಿಧಾನಸಭಾ ವ್ಯಾಪ್ತಿಯಲ್ಲಿ ಶಾಸಕ ಕೆ. ರಘುಪತಿ ಭಟ್ ಅವರ ನೇತೃತ್ವದಲ್ಲಿ ಗಣೇಶೋತ್ಸವ ಸಮಿತಿ (ರಿ) ಕಡಿಯಾಳಿ ಇವರ ಸಹಯೋಗದಲ್ಲಿ ನಗರ ಸಭಾ ಸದಸ್ಯರು ಹಾಗೂ ಸ್ಥಳೀಯ ಜನ ಪ್ರತಿನಿಧಿಗಳ ಸಹಕಾರದಲ್ಲಿ ಪ್ರಾರಂಭ ಮಾಡಲಾದ ಉಚಿತ ಬಸ್ಸಿನ ಸೇವೆಗೆ ಬ್ರಹ್ಮಾವರ ಬಸ್ಸು ನಿಲ್ದಾಣದಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದರು.
ಈ ಸಂದರ್ಭ ಶಾಸಕ ರಘುಪತಿ ಭಟ್ ಅವರು ಮಾತನಾಡಿ, ಒಂದು ವಾರದ ಮಟ್ಟಿಗೆ ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಉಚಿತ ಬಸ್ಸಿನ ವ್ಯವಸ್ಥೆ ಕಲ್ಪಿಸಲಾಗಿದೆ. ಬಸ್ನಲ್ಲಿ ಸ್ಯಾನಿಟೈಸರ್ ಬಳಕೆ, ಸಾಮಾಜಿಕ ಅಂತರ, ಪ್ರಯಾಣಿಕರ ವಿವರ ಸೇರಿದಂತೆ ಮುಂತಾದ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡಿದ್ದು, ಈ ಬಗ್ಗೆ ಸಾರ್ವಜನಿಕರು ಸಹಕರಿಸಿದ ಬಳಿಕ ನಿರಂತರವಾಗಿ ಬಸ್ಸು ಸಂಚಾರಕ್ಕೆ ಅವಕಾಶ ನೀಡಲಾಗುವುದು ಎಂದು ತಿಳಿಸಿದರು.