ಕಡಬ, ಮೇ 25(Daijiworld News/MSP): ನೂತನ ತಾಲೂಕು ಕೇಂದ್ರ ಕಡಬದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಶಂಕುಸ್ಥಾಪನೆ ಆಗಿ ಒಂದು ವರ್ಷದ ಬಳಿಕ ಇದೀಗ ಗುದ್ದಲಿ ಪೂಜೆಯ ಮೂಲಕ ಕಾಮಗಾರಿಗೆ ಮತ್ತೆ ಜೀವ ಬಂದಂತಾಗಿದೆ.
ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಒಂದೇ ಸೂರಿನಡಿಯಲ್ಲಿ ವಿವಿಧ ಇಲಾಖೆಗಳ ಕಚೇರಿಗಳು ತೆರೆಯಬೇಕು ಎನ್ನುವ ಸರಕಾರದ ಆಶಯದಂತೆ ಕಡಬದಲ್ಲಿ ಮಿನಿ ವಿಧಾನಸೌಧ ನಿರ್ಮಾಣಕ್ಕೆ 10 ಕೋಟಿ ರೂ. ಅನುದಾನ ಬಿಡುಗಡೆಯಾಗಿದ್ದು, ಕಡಬ ತಹಶೀಲ್ದಾರ್ ಕಚೇರಿ ಬಳಿ ಸೋಮವಾರದಂದು ಸುಳ್ಯ ವಿಧಾನ ಸಭಾ ಕ್ಷೇತ್ರದ ಶಾಸಕ ಎಸ್. ಅಂಗಾರ ಗುದ್ದಲಿ ಪೂಜೆ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಿದರು.
ಈ ವೇಳೆ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಈಗಾಗಲೇ ಹಲವಾರು ಗುದ್ದಲಿ ಪೂಜೆಗಳು ನೆರವೇರಿದ ಸೇತುವೆ ಕಾಮಗಾರಿಗಳ ಸ್ಥಗಿತವಾದ ಬಗ್ಗೆ ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರಿಸಿದ ಶಾಸಕರು, ಅರಣ್ಯ ಇಲಾಖೆಯ ಕೆಲವು ಅಡೆತಡೆಗಳಿಂದಾಗಿ ಕಾಮಗಾರಿ ಸ್ಥಗಿತಗೊಂಡಿದ್ದು,ಕೂಡಲೇ ಅವುಗಳನ್ನು ನಿವಾರಿಸಿ ಕಾಮಗಾರಿ ಆರಂಭಿಸಲಾಗುವುದು ಎಂದಿದ್ದಾರೆ.
ತಹಶೀಲ್ದಾರ್ ಕಚೇರಿ ಬಳಿ ಸರ್ವೆ ನಂಬ್ರ 130/1ಎಪಿ2ರಲ್ಲಿ 1.60 ಎಕರೆ ಜಮೀನು ಕಾದಿರಿಸಲಾಗಿದ್ದು ಕಟ್ಟಡ ನಿರ್ಮಾಣದ ಜವಾಬ್ದಾರಿಯನ್ನು ಕರ್ನಾಟಕ ಗೃಹ ಮಂಡಳಿಗೆ ವಹಿಸಲಾಗಿದೆ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ತಾಲೂಕು ಕೇಂದ್ರ ಉದ್ಘಾಟನೆಯಾಗಿದ್ದು ಈ ವೇಳೆ ಮಿನಿ ವಿಧಾನಸೌಧಕ್ಕೆ ಅಂದಿನ ಕಂದಾಯ ಸಚಿವರಾಗಿದ್ದ ವಿ.ಆರ್ ದೇಶಪಾಂಡೆ ಶಂಕುಸ್ಥಾಪನೆ ನೆರವೇರಿಸಿದ್ದರು.
ಇದೀಗ ಮತ್ತೆ ಎರಡನೇ ಬಾರಿಗೆ ಕಾಮಗಾರಿಗೆ ಚಾಲನೆ ದೊರೆತಿರುವುದು ಕಡಬದ ಜನತೆಗೆ ಸಂತೋಷವನ್ನು ತಂದಿದೆ. ಈ ವೇಳೆ ಪಕ್ಷದ ಪ್ರಮುಖ ಮುಖಂಡರು ಉಪಸ್ಥಿತರಿದ್ದರು.