ಮಾ, 22: ಆದಾಯ ತೆರಿಗೆ ಇಲಾಖೆಯ ಸಂದರ್ಭದಲ್ಲಿ ದಾಳಿ ವೇಳೆ ದೊರೆತ ದಾಖಲೆಗಳನ್ನು ನಾಶ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂಧನ ಸಚಿವ ಡಿಕೆ ಶಿವಕುಮಾರ್ ಗೆ ಮ್ಯಾಜಿಸ್ಟ್ರೇಟ್ ಕೋರ್ಟ್ ಕಟ್ಟಡದಲ್ಲಿರುವ ವಿಶೇಷ ಕೋರ್ಟ್ ಗುರುವಾರ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. 25 ಸಾವಿರ ರೂ. ಶ್ಯೂರಿಟಿ, ಸಾಕ್ಷಿ ನಾಶ ಮಾಡಬಾರದು, ತನಿಖಾಧಿಕಾರಿಗಳ ಮುಂದೆ ಸರಿಯಾಗಿ ವಿಚಾರಣೆಗೆ ಹಾಜರಾಗಬೇಕು ಎಂಬ ಷರತ್ತುಗಳೊಂದಿಗೆ ನ್ಯಾಯಾಧೀಶರು ಜಾಮೀನು ಮಂಜೂರು ಮಾಡಿದ್ದಾರೆ.ಅಲ್ಲದೆ ಇಬ್ಬರು ಶ್ಯೂರಿಟಿಗೆ ಕೋರ್ಟ್ ಸೂಚನೆ ನೀಡಿದೆ. ಹೀಗಾಗಿ ಡಿಕೆ ಶಿವಕುಮಾರ್ ಬಂಧನ ಭೀತಿಯಿಂದ ಪಾರಾದಂತಾಗಿದೆ.
ಅಕ್ರಮ ಆಸ್ತಿ ಸಂಪಾದನೆ ಹಾಗೂ ತೆರಿಗೆ ವಂಚನೆ ಆರೋಪದ ಮೇಲೆ ಐಟಿ ಇಲಾಖೆ ಈಗಲ್ ಟನ್ ರೆಸಾರ್ಟ್ ಮೇಲೆ ದಾಳಿ ನಡೆಸಿದ ವೇಳೆ ಡಿಕೆಶಿ ಸಹೋದರರು ಸಾಕ್ಷ್ಯ ನಾಶಕ್ಕೆ ಪ್ರಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿಪಟ್ಟಂತೆ ನೃಪತುಂಗ ರಸ್ತೆಯಲ್ಲಿರುವ ವಿಶೇಷ ಕೋರ್ಟ್ ನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು.
ವಿಚಾರಣೆಯ ಸಂದರ್ಭದಲ್ಲಿ, ಡಿಕೆಶಿ ಸಹೋದರರ ಪರ ವಕೀಲರು ವಾದ ಮಂಡಿಸಿ, ಡಿಕೆಶಿ ಅವರು ಹರಿದು ಹಾಕಿರುವುದು ಬರೇ 20 ರೂಪಾಯಿ ಬೆಲೆಯ ಚೀಟಿ. ಅದೇನೂ ಮಹತ್ವದ ಸಾಕ್ಷ್ಯವಲ್ಲ.ಹೀಗಾಗಿ ಜಾಮೀನು ಮಂಜೂರು ಮಾಡಬೇಕೆಂದು ವಾದಿಸಿದರು ಇದಕ್ಕೆ ಪ್ರತಿಯಾಗಿ ತೆರಿಗೆ ಇಲಾಖೆಯ ಪರ ವಕೀಲರು, ಡಿಕೆ ಶಿವಕುಮಾರ್ ಅವರಿಗೆ ಈ ಪ್ರಕರಣದಲ್ಲಿ ಯಾವುದೇ ಕಾರಣಕ್ಕೂ ಜಾಮೀನು ನೀಡಬಾರದು ಎಂದು ವಾದ ಮಂಡಿಸಿದರು.ಅಲ್ಲಿ ದೊರೆತ ಕುರುಹುಗಳನ್ನು ತನಿಖೆ ನಡೆಸಿದಾಗ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಡಿಕೆಶಿ ಹರಿದು ಹಾಕಿರುವ ದಾಖಲೆಗಳು ಹಲವು ಕಂಪನಿಗಳ ವ್ಯವಹಾರಕ್ಕೆ ಸಂಬಂಧಪಟ್ಟದ್ದು ಎಂದು ಹೇಳಿದ್ದರು. ಡಿಕೆಶಿ ಅವರು ಹರಿದು ಹಾಕಿರುವುದು ಕೇವಲ 20 ರೂಪಾಯಿ ಬೆಲೆಯ ದಾಖಲೆ ಅಲ್ಲ, ರೆಸಾರ್ಟ್ ನಲ್ಲಿ ಸಿಕ್ಕಿದ್ದು 10 ಕೋಟಿಗೂ ಬೆಲೆ ಬಾಳುವ ದಾಖಲೆ ಎಂದು ಪ್ರತಿಪಾದಿಸಿದರು.ಕೊನೆಗೆ ಎರಡೂ ವಾದ ಆಲಿಸಿದ ಕೋರ್ಟ್ ಜಾಮೀನು ಮಂಜೂರು ಮಾಡಿ ತೀರ್ಪು ಪ್ರಕಟಿಸಿದೆ. ಹೀಗಾಗಿ ಡಿಕೆ ಶಿವಕುಮಾರ್ ಅವರಿಗೆ ಬಿಗ್ ರಿಲೀಫ್ ಸಿಕ್ಕಂತಾಗಿದೆ.