ಬೆಳ್ತಂಗಡಿ, ಮೇ 25 (DaijiworldNews/PY) : ತಾಲೂಕಿಗೆ ಕಳೆದ ಮೂರುದಿನಗಳಿಂದ ಕೊರೊನಾ ಆಘಾತವನ್ನು ನೀಡುತ್ತಿದ್ದು ಸೋಮವಾರ ತಾಲೂಕಿನಲ್ಲಿ ಮೂರು ಮಂದಿಗೆ ಕೊರೊನಾ ಧೃಡಪಟ್ಟಿದ್ದು ಇವರಲ್ಲಿ ಓರ್ವ ಮೃತಪಟ್ಟಿದ್ದು, ವೇಣೂರು ಪರಿಸರದ ಜನರಲ್ಲಿ ಭಯ ಮೂಡಿಸಿದೆ.
ತಾಲೂಕಿನ ವೇಣೂರು ಗ್ರಾಮದ 43 ವರ್ಷ ಪ್ರಾಯದ ವ್ಯಕ್ತಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇವರು ಹೃದಯ ಸಂಬಂಧಿ ರೋಗದಿಂದ ಬಳಲುತ್ತಿದ್ದರು. ಇವರನ್ನು ಚಿಕಿತ್ಸೆಗೆ ಮಂಗಳೂರಿನ ಸರಕಾರಿ ಆಸ್ಪತ್ರೆಗೆ ಶನಿವಾರ ದಾಖಲಿಸಿದ್ದು, ಅದೇ ದಿನ ಅವರು ಮೃತ ಪಟ್ಟಿದ್ದರು. ಮಾ 25ರಂದು ಇವರ ಕೊರೊನಾ ಪರೀಕ್ಷೆಯ ವರದಿ ಬಂದಿದ್ದು ರೋಗ ಧೃಡಪಟ್ಟಿದೆ.
ಇತರ ಇಬ್ಬರು ಸೋಂಕಿತರು ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ.
ಇವರಲ್ಲಿ ಒಬ್ಬರು ಬೆಳ್ತಂಗಡಿ ತಾಲೂಕಿನ ಆರಂಬೋಡಿ ಕ್ವಾರಂಟೈನ್ ಕೇಂದ್ರದಲ್ಲಿದ್ದರೆ, ಮತ್ತೊಬ್ಬರು ಹೊಕ್ಕಾಡಿಗೋಳಿ ಕ್ವಾರಂಟೈನ್ ಕೇಂದ್ರದಲ್ಲಿದ್ದರು. ಸದ್ಯ ಇವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ವೇಣೂರಿನ ಮೃತ ವ್ಯಕ್ತಿ ಸ್ಥಳೀಯವಾಗಿ ರಿಕ್ಷಾ ಓಡಿಸಿಕೊಂಡಿದ್ದವರಾಗಿದ್ದು, ಅವರಿಗೆ ಹೇಗೆ ಕೊರೊನಾ ಬಂದಿದೆ ಎಂಬುದು ಇನ್ನೂ ಪತ್ತೆಯಾಗಿಲ್ಲ. ಅವರು ಈ ಹಿಂದೆ ಎಲ್ಲಿಯೂ ಪ್ರಯಾಣ ಬೆಳೆಸಿದ ದಾಖಲೆಗಳು ಇಲ್ಲವಾಗಿದೆ. ಅವರ ಸಂಪರ್ಕ ಪಟ್ಟಿಯನ್ನು ತಯಾರಿಸುವ ಪ್ರಯತ್ನ ನಡೆಯುತ್ತಿದೆ. ಅವರು ಚಿಕಿತ್ಸೆ ಪಡೆದ ಆಸ್ಪತ್ರೆಗಳನ್ನು ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಅವರ ಮನೆ ಇರುವ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿದ್ದು ಜನರಿಗೆ ಎಚ್ಚರಿಕೆಯನ್ನು ನೀಡಲಾಗಿದೆ.
ಶನಿವಾರ ರೋಗ ಪತ್ತೆಯಾದ ಶಿರ್ಲಾಲಿನ ಮಹಿಳೆಗೂ ರೋಗ ಎಲ್ಲಿಂದ ಬಂದಿದೆ ಎಂಬ ಬಗ್ಗೆ ಇನ್ನೂ ಮಾಹಿತಿ ಇಲ್ಲವಾಗಿದ್ದು, ಅವರು ತಾಲೂಕಿನ ವಿವಿದೆಡೆಗಳಲ್ಲಿ ತಿರುಗಾಡಿದ್ದು ಅದೆಲ್ಲವನ್ನೂ ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಕೆಲವು ಅಂಗಡಿಗಳನ್ನು ಮುಚ್ಚಿಸಲಾಗಿದೆ. ಹಲವರನ್ನು ಕ್ವಾರಂಟೈನ್ ಮಾಡಲಾಗಿದೆ. ಈ ಎರಡೂ ಪ್ರಕರಣಗಳು ತಾಲೂಕಿನ ಜನರಲ್ಲಿ ಹೆಚ್ಚಿನ ಭಯ ಮೂಡಿಸಲು ಕಾರಣವಾಗಿದ್ದು ರೋಗಲಕ್ಷಣಗಳಿಲ್ಲದ ರೋಗ ಪೀಡಿತರು ಇರುವ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿದೆ. ಇದೀಗ ತಾಲೂಕಿನಲ್ಲಿ ಆರು ಮಂದಿಗೆ ರೋಗ ದೃಢಪಟ್ಟಿದ್ದು ಓರ್ವ ಗುಣಮುಖನಾಗಿದ್ದು ಓರ್ವ ಮೃತಪಟ್ಟಿದ್ದಾನೆ. ನಾಲ್ಕು ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವೇಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಮೂಡುಕೋಡಿ ಗ್ರಾಮದ ಪಂಜಾಲುಬೈಲು ಮತ್ತು ವೇಣೂರಿನ ಮಹಾವೀರ ನಗರದಲ್ಲಿ ಸಂಚರಿಸಿದ್ದ 43ವರ್ಷದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದು, ಅವರಿಗೆ ಕೊರೊನಾ ಸೋಂಕಿರುವುದು ವರದಿಯಿಂದ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಮೃತಪಟ್ಟ ವ್ಯಕ್ತಿಯ ಸಂಪರ್ಕಕ್ಕೆ ಬಂದಿರುವವರು ಕೂಡಲೇ ವೇಣೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ತಪಾಸಣೆ ಮಾಡಿಸಬೇಕು ಎಂದು ವೇಣೂರು ಗ್ರಾಮ ಪಂಚಾಯತ್ ಪ್ರಕಟಣೆಯಲ್ಲಿ ತಿಳಿಸಿದೆ.
ವೇಣೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಪ್ರತಿಯೊಬ್ಬರು ಮಾಸ್ಕ್ ಧರಿಸುವುದು ಕಡ್ಡಾಯ ಮತ್ತು ಸಾಮಾಜಿಕ ಅಂತರ ಕಡ್ಡಾಯ ಪಾಲಿಸಬೇಕು. ಮಾಸ್ಕ್ ಧರಿಸದಿದ್ದಲ್ಲಿ ಗ್ರಾಮ ಪಂಚಾಯಿತಿಯಿಂದ ರೂ.100 ದಂಡ ವಿಧಿಸಲಾಗುವುದು.
ಮೃತ ವ್ಯಕ್ತಿಯ ವಾಸ್ತವ್ಯದ ಮನೆ ವ್ಯಾಪ್ತಿಯು ಸೀಲ್ಡೌನ್ (ಕಂಟೈನ್ಮೆಂಟ್ ವಲಯ) ಆಗಿರುವುದರಿಂದ ಈ ವ್ಯಾಪ್ತಿಯಲ್ಲಿನ ಮನೆಯ ಸುತ್ತಮುತ್ತ ಸಾರ್ವಜನಿಕರು ಸಂಚಾರ ಮತ್ತು ಸಂಪರ್ಕವನ್ನು ನಿಷೇಧಿಸಲಾಗಿದೆ ಎಂದು ಗ್ರಾ.ಪಂ. ಪ್ರಕಟಣೆ ತಿಳಿಸಿದೆ. ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ.