ಮಂಗಳೂರು, ಮಾ 23: ಹನಿಟ್ರ್ಯಾಪ್ ಮಾಡಿ 3 ಲಕ್ಷ ರೂಪಾಯಿ ಸುಲಿಗೆ ಮಾಡಿರುವ ಮೂವರು ಯುವತಿಯರ ಸಹಿತ ೬ ಮಂದಿ ಆರೋಪಿಗಳನ್ನು ನಗರದ ಸಿಸಿಬಿ ಪೊಲೀಸರು ಬಂದಿಸಿದ್ದಾರೆ. ಇವರು ನಿವೃತ್ತ ಸರಕಾರಿ ಉದ್ಯೋಗಿಯನ್ನು ಮಸಾಜ್ ನೆಪದಲ್ಲಿ ಹನಿಟ್ರ್ಯಾಪ್ ಮಾಡಿದ್ದರು. ಬಂಧಿತರನ್ನು ಮೂವರು ಯುವತಿಯರ ಸಹಿತ ಜೈಲ್ ರೋಡ್ ನ ಪ್ರೀತೇಶ್, ಕಳಸದ ರವಿ, ಶಕ್ತಿನಗರರದ ರಮೇಶ್ ಎಂದು ಗುರುತಿಸಲಾಗಿದೆ.
ಪ್ರಕರಣದ ವಿವರ:
ನಿವೃತ್ತ ಸರ್ಕಾರಿ ಉದ್ಯೋಗಿ ಮೇರಿಹಿಲ್ ನಿವಾಸಿಯೊಬ್ಬರಿಗೆ ಯುವತಿಯರಿಂದ ಮಸಾಜ್ ಮಾಡಿಸುವುದಾಗಿ ಆರೋಪಿಗಳು ನಂಬಿಸಿದ್ದರು. ಅದರಂತೆ ಅವರಿಗೆ ದೇರೆಬೈಲ್ ನಲ್ಲಿರುವ ಯುವತಿಯರನ್ನು ಪರಿಚಯಿಸಿ ಮಾ೨೦ ರಂದು ಆಕೆಯ ಮನೆಗೆ ಕಳುಹಿಸಿ ಕೊಟ್ಟಿದ್ದರು. ಆ ಮನೆಗೆ ಹೋದ ಕೆಲ ಹೊತ್ತಿನ ಬಳಿಕ ಮೂವರು ಅಪರಿಚಿತರು ಏಕಾಏಕಿ ಪ್ರವೇಶಿಸಿ ಮಸಾಜ್ ಗಾಗಿ ಬಂದ ವ್ಯಕ್ತಿಯನ್ನು ನಗ್ನಗೊಳಿಸಿ ಯುವತಿಯರ ಜತೆ ವಿಡಿಯೋ , ಪೋಟೋ ತೆಗೆಸಿ ಮೂರು ಲಕ್ಷ ರೂ. ಹಣದ ಬೇಡಿಕೆಯಿಟ್ಟು ಬ್ಲಾಕ್ ಮೇಲೆ ಮಾಡಿದ್ದರು ಎಂದು ಆರೋಪಿಸಲಾಗಿದೆ. ಇದರಿಂದ ಅಘಾತಗೊಂಡ ವ್ಯಕ್ತಿ ಹಣ ನೀಡಲು ಒಪ್ಪಿಗೆ ನೀಡಿದ್ದಲ್ಲದೆ 3 ಲಕ್ಷ ರೂ ಗಳನ್ನು ಆರೋಪಿ ರವಿಯ ಬ್ಯಾಂಕ್ ಅಕೌಂಟ್ ಗೆ ಜಮೆ ಮಾಡಿದ್ದರು.
ಈ ಘಟನೆ ನಡೆದು ಕೆಲವು ದಿನಗಳ ಬಳಿಕ ಆರೋಪಿಗಳು ಮತ್ತೆ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡದಿದ್ದಲ್ಲಿ ಯುವತಿಯರ ಜತೆಗಿದ್ದ ಪೋಟೋವನ್ನು ವಾಟ್ಸಪ್ , ಫೇಸ್ ಬುಕ್ ನಲ್ಲಿ ಹರಿಯಬಿಡುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ವಿಚಲಿತರಾದ ವ್ಯಕ್ತಿ ಕೊನೆಗೆ ಕಾವೂರು ಠಾಣೆಗೆ ದೂರು ನೀಡಿದ್ದಾರೆ.ತನಿಖೆಯನ್ನು ಕೈಗೆತ್ತಿಗೊಂಡ ಸಿಸಿಬಿ ಪೊಲೀಸರು ಪ್ರಕರಣವನ್ನು ಭೇದಿಸುವಲ್ಲಿ ಸಫಲರಾಗಿದ್ದಾರೆ. ಕಾರ್ಯಾಚರಣೆಯಲ್ಲಿ ಸಿಸಿಬಿ ಇನ್ಸ್ ಪೆಕ್ಟರ್ ಶಾಂತರಾಮ್ .ಪಿಎಸ್ ಐ ಗಳಾದ ಶ್ಯಾಮ್ ಸುಂದರ್ ,ಕಬ್ಬಾಲ್ ರಾಜ್ ಮತ್ತು ಸಿಬ್ಬಂದಿ ಭಾಗವಹಿಸಿದ್ದರು.