ಕಾಸರಗೋಡು, ಮೇ 26 (Daijiworld News/MB) : ಜಿಲ್ಲೆಯಲ್ಲಿ ಮಂಗಳವಾರ ಮೂವರಿಗೆ ಕೊರೊನಾ ಸೋಂಕು ದ್ರಢಪಟ್ಟಿದ್ದು ಚಿಕಿತ್ಸೆ ಪಡೆಯುತ್ತಿದ್ದ ಇಬ್ಬರು ಗುಣಮುಖರಾಗಿದ್ದಾರೆ.
ಮಹಾರಾಷ್ಟ್ರದಿಂದ ಆಗಮಿಸಿದ ಮಧೂರು ನಿವಾಸಿಗಳಾದ ಇಬ್ಬರು, ಕೊಲ್ಲಿ ರಾಷ್ಟ್ರದಿಂದ ಆಗಮಿಸಿದ ಮಡಿಕೈ ನಿವಾಸಿಗೂ ರೋಗ ಖಚಿತವಾಗಿದೆ.
ಮಧೂರು ನಿವಾಸಿಗಳಾದ 28 ವರ್ಷದ ಪುರುಷ ಮತ್ತು 25 ವರ್ಷದ ಮಹಿಳೆ( ಇವರು ದಂಪತಿ), ಮಡಿಕೈ ನಿವಾಸಿ 28 ವರ್ಷದ ವ್ಯಕ್ತಿ ರೋಗ ಬಾಧಿತರು.
ಮಧೂರು ನಿವಾಸಿಗಳು ಮೇ 22 ರಂದು ಮುಂಬಯಿಂದ ಬಸ್ ನಲ್ಲಿ ಹೊರಟು, 23ರಂದು ತಲಪ್ಪಾಡಿಗೆ ಆಗಮಿಸಿದ್ದರು. ರೋಗ ಲಕ್ಷಣ ಕಂಡುಬಂದ ಹಿನ್ನೆಲೆಯಲ್ಲಿ ಇವರನ್ನು ಅದೇ ದಿನ ಕಾಸರಗೋಡು ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೋಂಕು ಖಚಿತಗೊಂಡ ಹಿನ್ನೆಲೆಯಲ್ಲಿ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯುತ್ತಿದೆ.
ಮಡಿಕೈ ನಿವಾಸಿ ಮೇ 19ರಂದು ಕತಾರ್ನಿಂದ ಕಣ್ಣೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಆಗಮಿಸಿದ ದಿನದಿಂದಲೇ ಕಾಞಂಗಾಡಿನ ಸರಕಾರಿ ಕ್ವಾರೆಂಟೈನ್ ನಲ್ಲಿ ದಾಖಲಿಸಲಾಗಿತ್ತು. ಸೋಂಕು ಖಚಿತಗೊಂಡ ಹಿನ್ನೆಲೆಯಲ್ಲಿ ಇವರನ್ನು ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜಿಗೆ ದಾಖಲಿಸಲಾಗುವುದು ಎಂದು ಜಿಲ್ಲಾ ವೈದ್ಯಾಧಿಕಾರಿ (ಆರೋಗ್ಯ) ಡಾ.ಎಂ.ವಿ.ರಾಮದಾಸ್ ತಿಳಿಸಿದ್ದಾರೆ.
ಇದೇ ವೇಳೆ ಸೋಂಕು ಖಚಿತಗೊಂಡು ಉಕ್ಕಿನಡ್ಕದ ಕಾಸರಗೋಡು ಮೆಡಿಕಲ್ ಕಾಲೇಜಿನಲ್ಲಿ ದಾಖಲಾಗಿದ್ದ ಪೈವಳಿಕೆ ನಿವಾಸಿಯಾದ 51 ವರ್ಷದ ವ್ಯಕ್ತಿ, ಕುಂಬಳೆ ನಿವಾಸಿ 49 ವರ್ಷದ ವ್ಯಕ್ತಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 3205 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 2624 ಮಂದಿ, ಆಸ್ಪತ್ರೆಗಳಲ್ಲಿ 581 ಮಂದಿ ನಿಗಾದಲ್ಲಿದ್ದಾರೆ. 340 ಮಂದಿ ಮಂಗಳವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ. ಮಂಗವಾರ ನೂತನವಾಗಿ 32 ಮಂದಿಯನ್ನು ಐಸೊಲೇಷನ್ ವಾರ್ಡಿಗೆ ದಾಖಲಿಸಲಾಗಿದೆ.
ಜಿಲ್ಲೆಯಲ್ಲಿ 6332 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 5722 ಮಂದಿಯ ವರದಿ ನೆಗೆಟಿವ್ ಆಗಿದ್ದು 181 ಮಂದಿಯ ವರದಿ ಇನ್ನಷ್ಟೇ ಲಭಿಸಬೇಕಿದೆ.