ಕಾಸರಗೋಡು, ಮೇ 26 (Daijiworld News/MB) : ಜಿಲ್ಲೆಯಲ್ಲಿ ಮಂಗಳವಾರ ಎಸ್.ಎಸ್.ಎಲ್.ಸಿ., ವಿ.ಎಚ್.ಎಸ್.ಇ. ಪರೀಕ್ಷೆ ಪರೀಕ್ಷೆಗಳು ಆರಂಭಗೊಂಡಿವೆ. ಕೋವಿಡ್ 19 ಹಿನ್ನೆಲೆಯಲ್ಲಿ ಹೆಚ್ಚುವರಿ ಜಾಗೃತಿಯೊಂದಿಗೆ ಪ್ರಬಲ ಕಟ್ಟುನಿಟ್ಟುಗಳೊಂದಿಗೆ ಪರೀಕ್ಷೆಗಳು ನಡೆಯುತ್ತಿವೆ. ಕರ್ನಾಟಕದಿಂದ ಆಗಮಿಸಿದ ಮಕ್ಕಳಿಗೆ ಯಾತ್ರಾ ಸೌಲಭ್ಯವನ್ನೂ ಒದಗಿಸಲಾಗಿತ್ತು.
ಬೆಳಗ್ಗೆ ವಿ.ಎಚ್.ಎಸ್.ಇ. ಪರೀಕ್ಷೆ, ಮಧ್ಯಾಹ್ನ ಎಸ್.ಎಸ್.ಎಲ್.ಸಿ. ಪರೀಕ್ಷೆಗಳು ನಡೆದಿವೆ. 2491 ಮಂದಿ ಜಿಲ್ಲೆಯಲ್ಲಿ ವಿ.ಎಚ್.ಎಸ್.ಇ. ಪರೀಕ್ಷೆಗೆ ಹಾಜರಾಗಲು ಸಿದ್ಧತೆ ನಡೆಸಿದ್ದರು. ಇವರಲ್ಲಿ 22 ಕೇಂದ್ರಗಳಲ್ಲಿ 2434 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಹಾಜರಾಗಲು ಸಿದ್ಧತೆ ನಡೆಸಿದವರಲ್ಲಿ 266 ಮಂದಿ ಕರ್ನಾಟಕದಲ್ಲಿ ಉಳಿದುಕೊಂಡಿದ್ದರು. ಇವರಲ್ಲಿ 236 ಮಂದಿ ತಲಪಾಡಿ ಮೂಲಕ ಆಗಮಿಸಿ ಪರೀಕ್ಷೆಗೆ ಹಾಜರಾಗಿದ್ದರು. 30 ಮಂದಿ ಹಾಜರಾಗಿರಲಿಲ್ಲ.
ಹೈಯರ್ ಸೆಕೆಂಡರಿ ಪರೀಕ್ಷೆಗಳು ನಾಳೆ (ಮೇ 27) ಆರಂಭಗೊಳ್ಳಲಿವೆ. ಈ ಪರೀಕ್ಷೆಗೆ ಹಾಜರಾಗಬೇಕಿರುವವರಲ್ಲಿ 204 ಮಂದಿ ಕರ್ನಾಟಕದಲ್ಲಿ ಉಳಿದುಕೊಂಡಿದ್ದಾರೆ.30 ಮಂದಿ ಸ್ವಂತ ಹೊಣೆಯಲ್ಲಿ ಪರೀಕ್ಷಾ ಕೇಂದ್ರಗಳಿಗೆ ಆಗಿಸುವುದಾಗಿ ಜಿಲ್ಲಾಡಳಿತೆಗೆ ತಿಳಿಸಿದ್ದಾರೆ. ಈ ವರೆಗೆ 93 ಮಂದಿ ಮಕ್ಕಳು ತಲಪಾಡಿ ಗಡಿ ಮೂಲಕ ಜಿಲ್ಲೆಗೆ ಆಗಮಿಸಿದ್ದಾರೆ.
ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳಿಗೆ ತಲಪುವುದರಿಂದ ತೊಡಗಿ ಉತ್ತರಪತ್ರಿಕೆಗಳ ಮೌಲ್ಯ ನಿರ್ಣಯ ವರೆಗೆ ಎಲ್ಲ ವಿಚಾರಗಳನ್ನೂ ಪ್ರಬಲ ಸುರಕ್ಷತೆಯೊಂದಿಗೆ ನಡೆಸಲು ಜಿಲ್ಲಾಡಳಿತೆ ಕ್ರಮ ಕೈಗೊಂಡಿದೆ. ತಲಪಾಡಿ ಗಡಿಯವರೆಗೆ ಆಗಮಿಸಿದ ವಿದ್ಯಾರ್ಥಿಗಳನ್ನು ಜಿಲ್ಲಾಡಳಿತ ಆಯಾ ಪರೀಕ್ಷಾ ಕೇಂದ್ರಗಳಿಗೆ ತಲುಪಿಸಿದೆ.