ಬೆಳ್ತಂಗಡಿ, ಮೇ 26 (Daijiworld News/MB) : ಜೂ. 25 ರಿಂದ ನಡೆಯುವ ಎಸ್.ಎಸ್.ಎಲ್.ಸಿ. ಪರೀಕ್ಷೆಗೆ ಸಾ.ಶಿ.ಇಲಾಖೆಯು ಸುರಕ್ಷತೆಯೊಂದಿಗೆ ಎಲ್ಲಾ ಸಕಲ ರೀತಿಯ ಸಿದ್ಧತೆಗಳನ್ನು ಮಾಡುತ್ತಿದೆ. ತಾಲೂಕಿನಲ್ಲಿ ಒಬ್ಬನೇ ಒಬ್ಬ ವಿದ್ಯಾರ್ಥಿಯು ಪರೀಕ್ಷೆಗೆ ಗೈರಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಶಾಲಾ ಶಿಕ್ಷಕರದ್ದು ಎಂದು ಶಾಸಕ ಹರೀಶ ಪೂಂಜ ತಿಳಿಸಿದರು.
ಮಂಗಳವಾರ ಇಲ್ಲಿನ ಧರ್ಮಸ್ಥಳ ಮಂಜುನಾಥೇಶ್ವರ ಕಲಾಭವನದಲ್ಲಿ ಪ್ರೌಢಶಾಲಾ ಶಿಕ್ಷಕರೊಂದಿಗೆ ಎಸ್.ಎಸ್.ಎಲ್.ಸಿ.ಪರೀಕ್ಷೆಯ ಪೂರ್ವ ತಯಾರಿ ಕುರಿತು ನಡೆದ ಚಿಂತನ ಮಂಥನ ಸಭೆಯಲ್ಲಿ ಅವರು ಸಲಹೆ,ಸೂಚನೆಗಳನ್ನು ಅವರು ನೀಡಿದರು.
ಇದುವರೆಗೆ ಕೊರೋನಾ ತಡೆಹಿಡಿಯಲು ಯುದ್ಧೋಪಾದಿಯಲ್ಲಿ ಆಶಾ ಕಾರ್ಯಕರ್ತೆಯವರು, ನರ್ಸ್ಗಳು, ವೈದ್ಯರುಗಳು ಕರ್ತವ್ಯ ನಿರ್ವಹಿಸಿದ್ದು ಅದೇ ರೀತಿ ಎಸ್ಎಸ್ಎಲ್ಸಿ ಪರೀಕ್ಷೆ ಸುವ್ಯವಸ್ಥಿತವಾಗಿ ನಡೆಸಲು ಶಿಕ್ಷಕರು ಸಿದ್ಧರಾಗಬೇಕು. ಸರಕಾರಿ, ಖಾಸಗಿ, ಅನುದಾನ ರಹಿತ ಪ್ರೌಢಶಾಲೆಗಳು ಎಂಬ ಭೇದವಿಲ್ಲದೆ, ಯಾವುದೇ ತಾರತಮ್ಯವೆಸಗದೆ ಎಲ್ಲರಿಗೂ ಸರ್ವ ರೀತಿ ಸಹಕಾರ ನಾನು ನೀಡಲು ಸಿದ್ಧ ಎಂದರು.
ಗ್ರಾಮೀಣ ಪ್ರದೇಶದ ಮಕ್ಕಳಿಗೆ ತಾಲೂಕಿನ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಸರಕಾರಿ, ಖಾಸಗಿ ಬಸ್ಸುಗಳ ವ್ಯವಸ್ಥೆಯನ್ನು ಉಚಿತವಾಗಿ ಮಾಡಲಾಗುವುದು. ಖಾಸಗಿ ಪರೀಕ್ಷೆ ಬರೆಯುವವರಿಗೆ ಮಂಗಳೂರಿಗೆ ಹೋಗಲು ಉಚಿತ ವಾಹನದ ವ್ಯವಸ್ಥೆ ಮಾಡಲಾಗುವುದು. ಬಸ್ಸಿನ ಅಗತ್ಯವಿರುವವರ ವಿವರಗಳನ್ನು ಇಲಾಖಾಧಿಕಾರಿಗಳಿಗೆ ವ್ಯವಸ್ಥಿತವಾಗಿ ತಿಳಿಸಬೇಕು. ತಜ್ಞರೊಂದಿಗೆ ಚರ್ಚಿಸಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಸಿದ್ಧಮಾಡಿದಲ್ಲಿ ಅದರ ಮುದ್ರಣ ಖರ್ಚನ್ನು ಭರಿಸಲಾಗುವುದು. ಹೊರಜಿಲ್ಲೆಯ ಮತ್ತು ತಾಲೂಕಿನ ದೂರದಲ್ಲಿರುವ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರದ ಸನಿಹ ವಸತಿ ವ್ಯವಸ್ಥೆಯನ್ನು ಅನುಕೂಲ ಮಾಡಿಕೊಡಲಾಗುವುದು. ವಿದ್ಯಾರ್ಥಿಗಳ ಆರೋಗ್ಯ ಸುರಕ್ಷತೆಯ ಉದ್ದೇಶದಿಂದ ಸ್ಯಾನಿಟೈಜರ್, ಮಾಸ್ಕ್ ಇತ್ಯಾದಿಗಳನ್ನು ಇಲಾಖೆ ಒದಗಿಸಲಿದೆ. ಪಿಪಿಇ ಕಿಟ್ಗಳ ಅಗತ್ಯವಿದ್ದಲ್ಲಿ ಉಚಿತವಾಗಿ ಒದಗಿಸಿಕೊಡಲಾಗುವುದು ಎಂದು ಶಾಸಕರು ಭರವಸೆ ನೀಡಿದರು.
ಸಭೆಯಲ್ಲಿದ್ದ ಮುಖ್ಯೋಪಾಧ್ಯಾಯರ ವಿವಿಧ ಸಂದೇಹಗಳಿಗೆ ಸೂಕ್ತವಾಗಿ ಸ್ಪಂದಿಸಿದ ಜಿಲ್ಲಾ ವಿದ್ಯಾಂಗ ಉಪನಿರ್ದೇಶಕ ಮಲ್ಲೇ ಸ್ವಾಮಿ ಅವರು, ತಾಲೂಕಿನಲ್ಲಿ ಒಟ್ಟು 13 ಪರೀಕ್ಷಾ ಕೇಂದ್ರಗಳಿವೆ. ಪರೀಕ್ಷೆಯ ಮೊದಲು ಎಲ್ಲಾ ಕೇಂದ್ರಗಳನ್ನು ಸ್ಯಾನಿಟೈಜರ್ ಮಾಡಲಾಗುವುದು. ಕೇಂದ್ರಗಳ ಪ್ರತಿಯೊಂದು ಕೋಣೆಗಳಿಗೆ ಸಿಸಿ ಟಿವಿ ಕಡ್ಡಾಯವಾಗಿದ್ದು, ಅಳವಡಿಸದಿದ್ದಲ್ಲಿ ಶಾಲ ಸಂಚಿತ ನಿಧಿಯನ್ನು ಬಳಸಿ ಕೂಡಲೇ ವ್ಯವಸ್ಥೆ ಮಾಡಿಕೊಳ್ಳಬೇಕು. ಹೊರಜಿಲ್ಲೆಯ ಮಕ್ಕಳನ್ನು ದೂರವಾಣಿ ಮುಖಾಂತರ ಸಂಪರ್ಕಿಸಿ ಒಂದೋ ಅವರಿರುವ ಊರಿನ ಸನಿಹದ ಕೇಂದ್ರಗಳಲ್ಲಿ ಅಥವಾ ಇಲ್ಲಿನ ಕೇಂದ್ರದಲ್ಲಿ ಪರೀಕ್ಷೆ ಬರೆಯುವಂತೆ ತಿಳಿಹೇಳಬೇಕಲ್ಲದೆ ಹೊರಗಿನ ಕೇಂದ್ರಗಳನ್ನು ಸಂಪರ್ಕಿಸಿ ಅಲ್ಲಿ ಅವರ ನೋಂದಾವಣೆ ಮಾಡುವುದಕ್ಕೆ ಸಹಕರಿಸಬೇಕು. ಏನಿದ್ದರೂ ಮಕ್ಕಳ ನಿರ್ಧಾರವೇ ಅಂತಿಮ. ಸೀಲ್ ಡೌನ್ ಆದ ಜಾಗದಲ್ಲಿ ಪರೀಕ್ಷಾರ್ಥಿಗಳು ಇದ್ದಲ್ಲಿ ಅವರನ್ನು ಪ್ರತ್ಯೇಕವಾಗಿ ಕರೆತಂದು ಪರೀಕ್ಷೆ ಮಾಡಿ ಪರೀಕ್ಷೆ ಬರೆಯುವಂತೆ ಮಾಡಲಾಗುವುದು. ಪ್ರತಿಯೊಂದು ಕೇಂದ್ರದಲ್ಲಿ ವಿಶೇಷವಾದ ಕೋಣೆಯೊಂದನ್ನು ಕಾದಿರಿಸಲಾಗುವುದು. ವಿದ್ಯಾರ್ಥಿಗಳಲ್ಲಿ ಅನಾರೋಗ್ಯ ಕಂಡು ಬಂದಲ್ಲಿ ಆ ಕೋಣೆಯಲ್ಲಿ ಬರೆಯುವ ಏರ್ಪಾಡು ಮಾಡಲಾಗುವುದು. ಇದರ ನಿರ್ವಹಣೆಗಾಗಿ ಪ್ರತಿಯೊಂದು ಕೇಂದ್ರಕ್ಕೆ ಸ್ಕೌಟ್-ಗೈಡ್ನ ಶಿಕ್ಷಕರನ್ನು ನೇಮಿಸಲಾಗುವುದು. ಅಲ್ಲದೇ ಪ್ರತಿಯೊಂದು ಕೇಂದ್ರದಲ್ಲಿ ಥರ್ಮಲ್ ಸ್ಕ್ಯಾನ್ ಇದ್ದು ಅಲ್ಲಿಗೆ ವೈದ್ಯರನ್ನು ಹಾಗೂ ನರ್ಸ್ಗಳನ್ನು ನಿಯುಕ್ತಿಗೊಳಿಸಲಾಗುವುದು. ಪರೀಕ್ಷಾ ಕೋಣೆಗಳಲ್ಲಿ ತಲಾ 20 ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿರುತ್ತದೆ. ಸರಕಾರ ಸರ್ವ ವಿಧದ ಸುರಕ್ಷತಾ ಕ್ರಮಗಳನ್ನು ಅನುಸರಿಸಿ ಪರೀಕ್ಷೆ ನಡೆಸಲಿದೆ ಎಂದರು.
ರಾಜ್ಯದಲ್ಲೇ ಮೊದಲ ಬಾರಿಗೆ ಇಂತಹ ಚಿಂತನ ಮಂಥನ ಸಭೆ ನಡೆಸಲಾಗುತ್ತಿದೆ. ಇದು ಇಲ್ಲಿನ ಶಾಸಕರಿಗೆ ಮಕ್ಕಳ ಮೇಲೆ ಇರುವ ಕಾಳಜಿಯನ್ನು ಪ್ರತಿಬಿಂಬಿಸುತ್ತದೆ ಎಂದರು.
ಫಲಿತಾಂಶ ಕಡಿಮೆ ಬಂದಿದೆ ಎಂಬ ಕಾರಣಕ್ಕೆ ಇದುರವರೆಗೆ ಯಾವುದೇ ಶಿಕ್ಷಕರನ್ನು ಅಮಾನತು ಮಾಡಿದ್ದಾಗಲಿ, ಅವರ ಭತ್ಯೆಯನ್ನು ತಡೆಹಿಡಿದದ್ದಾಗಲಿ, ವೇತನ ಕಡಿಮೆ ಮಾಡಿದ್ದಾಗಲಿ, ಶಿಕ್ಷೆ ಕೊಟ್ಟದ್ದಾಗಲಿ ಯಾವುದೇ ಉದಾಹರಣೆಗಳಿಲ್ಲ. ಏನಿದ್ದರೂ ಮಕ್ಕಳು ಉತ್ತೀರ್ಣರಾಗಿ ಮುಂದಿನ ತರಗತಿಗೆ ತೇರ್ಗಡೆಯಾಗಬೇಕು ಎಂಬುದಷ್ಟೇ ಗುರಿಯಾಗಿದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ವೇದಿಕೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ತಾರಕೇಸರಿ, ಬಿಆರ್ಸಿ ಶಂಭು ಶಂಕರ್, ದೈಹಿಕ ಶಿಕ್ಷಣಾಧಿಕಾರಿ ಭುವನೇಶ್ ಜಿ., ಪರೀಕ್ಷಾ ನೋಡೆಲ್ ಅಧಿಕಾರಿ ರಮೇಶ್ ಉಪಸ್ಥಿತರಿದ್ದರು. ಶಿಕ್ಷಣ ಸಂಯೋಜಕ ಸುಭಾಸ್ ಜಾಧವ್ ಸ್ವಾಗತಿಸಿದರು. ಪ್ರೌಢಶಾಲಾ ಮುಖ್ಯ ಶಿಕ್ಷಕ ಸಂಘದ ತಾಲೂಕಾಧ್ಯಕ್ಷ ಲಕ್ಷ್ಮೀನಾರಾಯಣ ವಂದಿಸಿದರು. ಶಿಕ್ಷಕ ಧರಣೇಂದ್ರ ಕುಮಾರ್ ಕಾರ್ಯಕ್ರಮ ನಿರ್ವಹಿಸಿದರು.