ಪುತ್ತೂರು, ಮಾ 23: ದುಷ್ಕರ್ಮಿಗಳಿಬ್ಬರು ಚಾಕು ಮತ್ತು ಪಿಸ್ತೂಲ್ ತೋರಿಸಿ ನಿವೃತ್ತ ಯೋಧರೊಬ್ಬರ ಮನೆಯಲ್ಲಿದ್ದ ನಗ ನಗದು ದೋಚಿ ಪರಾರಿಯಾಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಪುತ್ತೂರಿನ ಇಚಿಲಂಪಾಡಿಯಲ್ಲಿ ಈ ಘಟನೆ ನಡೆದಿದ್ದು ನಿವೃತ್ತ ಯೋಧ ನಾರಾಯಣ ಪಿಳ್ಳೆ ಎಂಬವರ ಮನೆಗೆ ನುಗ್ಗಿದ ಇಬ್ಬರು ದುಷ್ಕರ್ಮಿಗಳು ಮನೆಯಲ್ಲಿದ್ದ ವೃದ್ಧ ದಂಪತಿಗಳಿಗೆ ಚಾಕು ಮತ್ತು ಪಿಸ್ತೂಲು ತೋರಿಸಿ ಬೆದರಿಸಿದ್ದಾರೆ. ನಂತರ ಮನೆಯಲ್ಲಿದ್ದ 35,000 ರೂ ನಗದು ಹಾಗೂ 8 ಪವನ್ ಚಿನ್ನಾಭರಣ ಮತ್ತು 2 ಮೊಬೈಲ್ ಗಳನ್ನು ದೋಚಿ ಪರಾರಿಯಾಗಿದ್ದಾರೆ.
ದ್ವಿಚಕ್ರ ವಾಹನದಲ್ಲಿ ಬಂದಿದ್ದ ಇಬ್ಬರು ದುಷ್ಕರ್ಮಿಗಳು ರಾತ್ರಿ ವೇಳೆ ಮನೆಯೊಳಗೆ ನುಗ್ಗಿ ಕಳ್ಳತನ ಮಾಡಿದ್ದಾರೆ. ಸುಮಾರು 15 ನಿಮಿಷ ನಾರಾಯಣ ಪಿಳ್ಳೆ ಅವರ ಮನೆಯಲ್ಲೇ ಇದ್ದು, ಮಲೆಯಾಳಂ ಭಾಷೆಯಲ್ಲಿ ಮಾತಾನಾಡುತ್ತಿದ್ದರು ಎಂದು ಹೇಳಲಾಗಿದೆ.
ಘಟನೆಯ ಕುರಿತು ಉಪ್ಪಿನಂಗಡಿ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.