ಬೆಳ್ತಂಗಡಿ, ಮೇ 27 (Daijiworld News/MB) : ತಾಲೂಕಿನ ನಗರ ಭಾಗದಲ್ಲಿ ಗಂಡ ಹೆಂಡತಿ ಹಾಗೂ ಇಬ್ಬರು ಸಣ್ಣ ಮಕ್ಕಳನ್ನು ಒಳಗೊಂಡ ಎನ್.ಏರ್ ಪುರದ ನಿವಾಸಿಗಳು ಕಾಲ್ನಡಿಗೆಯ ಮೂಲಕ ತಮ್ಮ ಊರಿಗೆ ತೆರಳಿದ್ದಾರೆ. ಅವರು, ನಡೆದುಕೊಂಡು ಹೋಗುವುದನ್ನು ಕಂಡಂತಹ ಸ್ಥಳೀಯರಾದ ಗೌತಮ್, ಗಣೇಶ್ ಹಾಗೂ ಸುಶಾನ್ ಎಂಬವರು ಎನ್ಆರ್ಪುರ ನಿವಾಸಿಗಳನ್ನು ವಿಚಾರಿಸಿದ್ದಾರೆ. ಈ ವೇಳೆ, ಎನ್ಆರ್ ಪುರ ನಿವಾಸಿಗಳು ತಮ್ಮ ಕ್ವಾರಂಟೈನ್ ಅವಧಿ ಮುಗಿದ ಹಿನ್ನಲೆಯಲ್ಲಿ ಊರಿಗೆ ತೆರಳಲು ಸೂಚಿಸಿದ್ದಾರೆ. ಹಾಗಾಗಿ ನಾವು ಬೆಳ್ತಂಗಡಿ ತಾಲೂಕು ಕಚೇರಿಗೆ ತೆರಳಿದ್ದೆವು ಆದರೆ, ಈ ವೇಳೆ ಅಲ್ಲಿಯೂ ಸೂಕ್ತ ಸ್ಪಂದನೆ ದೊರಕದೆ ಕಾಲ್ನಡಿಗೆಯ ಮೂಲಕ ತೆರಳುತ್ತಿದ್ದೇವೆ ಎಂಬ ಆರೋಪವನ್ನು ಮಾಡಿದ್ದಾರೆ.
ಈ ಬಗ್ಗೆ ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಅವರ ಗಮನಕ್ಕೆ ತಂದಾಗ ಅವರು ಶ್ರಮಿಕ ಕಚೇರಿಯ ಸಿಬ್ಬಂದಿಯನ್ನು ಕೂಡಲೇ ಸ್ಥಳಕ್ಕೆ ಕಳುಹಿಸಿದ್ದಾರೆ. ಸ್ಥಳಕ್ಕೆ ತೆರಳಿದ ಸಿಬ್ಬಂದಿ ಎನ್ ಆರ್ ಪುರ ನಿವಾಸಿಗಳನ್ನು ವಿಚಾರಿಸಿದ್ದಾರೆ. ಮಾತ್ರವಲ್ಲದೆ, ರಾತ್ರಿ ವೇಳೆ ತಾತ್ಕಾಲಿಕವಾಗಿ ಉಳಿದುಕೊಳ್ಳುವ ವ್ಯವಸ್ಥೆ ಮತ್ತು ಊಟದ ವ್ಯವಸ್ಥೆಯನ್ನೂ ಮಾಡಿದ್ದಾರೆ.
ಬಳಿಕ, ಎನ್ ಆರ್ ಪುರ ನಿವಾಸಿಗಳಿದ್ದ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಬಳಿ ಈ ಬಗ್ಗೆ ಮಾಹಿತಿ ಕೇಳಿದಾಗ ಅವರು, ಎನ್ ಆರ್ ಪುರ ನಿವಾಸಿಯ ಹೆಂಡತಿಯ ತವರು ಮನೆಗೆಂದು ಲಾಕ್ ಡೌನ್ ಸಂದರ್ಭದಲ್ಲಿ ತರಕಾರಿ ವಾಹನದ ಮೂಲಕ ಊರಿಗೆ ಬಂದಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿದ ತಕ್ಷಣ ಅವರನ್ನು ಕ್ವಾರಂಟೈನ್ ಮಾಡಲಾಗಿತ್ತು. ಇದೀಗ ಅವರ ಕ್ವಾರಂಟೈನ್ ಅವಧಿ ಮುಗಿದ ಹಿನ್ನಲೆಯಲ್ಲಿ ಅವರ ಮನೆಗೆ ತೆರಳಲು ಸೂಚಿಸಲಾಗಿತ್ತು. ಆದರೆ, ಅರಸಿನಮಕ್ಕಿ ಉದನೆಯಲ್ಲಿರುವ ಸಂಬಂಧಿಕರ ಮನೆಗೂ ಪ್ರವೇಶ ನಿರಾಕರಿಸಿದ್ದರು. ಆದರೆ, ನಮ್ಮಲ್ಲಿ ಯಾವುದೇ ಮಾಹಿತಿ ನೀಡದೆ ತೆರಳಿದ್ದಾರೆ ಎಂಬ ಮಾಹಿತಿಯನ್ನು ಪಿಡಿಒ ನೀಡಿದ್ದಾರೆ.
ಸದ್ಯ, ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಅವರು ಎನ್ ಆರ್ ಪುರದ ನಿವಾಸಿಗಳಿಗೆ ಊರಿಗೆ ಕಳುಹಿಸಲು ವಾಹನದ ವ್ಯವಸ್ಥೆಯನ್ನು ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.