ಧರ್ಮಸ್ಥಳ, ಮೇ 27 (Daijiworld News/MSP): ಕೊರೊನಾ ವೈರಸ್ ಅಟ್ಟಹಾಸ ಬಳಿಕ ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ವಿಧಿಸಲಾಗಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸರಕಾರದ ನಿರ್ದೇಶನದಂತೆ ಜೂ.1 ರಿಂದ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.
ಇದೀಗ ಮುಜರಾಯಿ ಇಲಾಖೆಯ ನಿಯಮಾವಳಿಗಳನ್ನು ಅನುಸರಿಸಿ ಭಕ್ತರಿಗೆ ಪ್ರವೇಶಕ್ಕೆ ಅವಕಾಶ ನೀಡಿದ್ದು, ಇದರಂತೆ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಜೂ.1ರಿಂದ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುತ್ತದೆ.ಸರ್ಕಾರದ ನಿಯಮಾವಳಿಗಳನ್ನು ಪಾಲಿಸುವುದರ ಜೊತೆಗೆ ಕ್ಷೇತ್ರದ ವತಿಯಿಂದ ಅತ್ಯಂತ ಕಾಳಜಿ ವಹಿಸಲಾಗುತ್ತಿದ್ದು, ಕೊರೊನಾ ನಿಯಂತ್ರಣಕ್ಕೆ ಸಂಪೂರ್ಣ ಒತ್ತು ನೀಡಲಾಗುತ್ತಿದೆ.ಸಾಮಾಜಿಕ ಅಂತರ ಕಾಪಾಡುವುದು, ಸ್ಯಾನಿಟೈಸರ್ ಬಳಕೆ, ಮಾಸ್ಕ್ ಕಡ್ಡಾಯ ಒಳಗೊಂಡಂತೆ ಭಕ್ತರ ಸಂಖ್ಯೆಯಲ್ಲಿ ನಿಯಂತ್ರಣ ಕಾಪಾಡಲಾಗುವುದು.ಅಂತರ ಕಾಯ್ದುಕೊಳ್ಳಲು ಪೂರ್ವ ತಯಾರಿ ಮಾಡಲಾಗುವುದು. ವಸತಿ ವ್ಯವಸ್ಥೆ ಬಗ್ಗೆ ಯಾವುದೇ ತೀರ್ಮಾನ ಸದ್ಯಕ್ಕೆ ಇಲ್ಲ ಎಂದು ಡಾ. ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ವೀರು ವಿ.ಶೆಟ್ಟಿ ತಿಳಿಸಿದ್ದಾರೆ.
ಲಾಕ್ಡೌನ್ ಸಡಿಲಿಕೆಯಾದರೂ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಅಂಗಡಿ ತೆರೆಯದೆ, ಗ್ರಾಮಸ್ಥರು ಓಡಾಡದೆ, ವಾಹನ ಚಾಲಕರ ಸಹಿತ ಎಲ್ಲರೂ ಸ್ವಯಂ ಪ್ರೇರಿತ ಜಾಗೃತಿ ಮೂಡಿಸಿದ್ದಾರೆ. ಇದುವರೆಗೆ ಶ್ರೀ ಕ್ಷೇತ್ರದಲ್ಲಿ ನಡೆದ ಧರ್ಮ ಜಾಗೃತಿಗೆ ಮಾದರಿಯಾಗಿದೆ ಎಂದು ಕಾರ್ಯದರ್ಶಿಗಳು ತಿಳಿಸಿದ್ದಾರೆ.