ಮಂಗಳೂರು, ಮೇ 28 (Daijiworld News/MSP): ಕೊರೊನಾ ಸಾಂಕ್ರಮಿಕ ರೋಗ ತಡೆಯುವ ನಿಟ್ಟಿನಲ್ಲಿ ದೇಶದೆಲ್ಲೆಡೆ ನಗದು ರಹಿತ ಡಿಜಿಟಲ್ ಪೇಮೆಂಟ್ ಗೆ ಹೆಚ್ಚು ಹೆಚ್ಚು ಉತ್ತೇಜನ ನೀಡಲಾಗುತ್ತಿದೆ. ಇದೇ ಹಿನ್ನಲೆಯಲ್ಲಿ ಮಂಗಳೂರಿನಲ್ಲಿ ಓಡಾಡುವ ಸಿಟಿ ಬಸ್ಗಳು ಕೂಡಾ ತಮ್ಮ ಪ್ರಯಾಣಿಕರಿಗೆ ಚಿಲ್ಲರೆ ಸಮಸ್ಯೆ ಹಾಗೂ ನಗದು ವಹಿವಾಟು ತಪ್ಪಿಸಿಲು ಕ್ಯಾಶ್ ಲೆಸ್ ಪೆಮೇಂಟ್ ವ್ಯವಸ್ಥೆ ಮಾಡಲು ಮುಂದಾಗಿದೆ.
ಇದಕ್ಕಾಗಿ ಚಲೋ ಸಂಸ್ಥೆಯ ಸಹಯೋಗದೊಂದಿಗೆ ನಗರದಲ್ಲಿ ಕಾರ್ಯಾಚರಿಸುತ್ತಿರುವ ಎಲ್ಲಾ ಸಿಟಿ ಬಸ್ಗಳಲ್ಲಿ ವಿನೂತನ ಸ್ಮಾರ್ಟ್ ಕಾರ್ಡ್ ವ್ಯವಸ್ಥೆಯನ್ನು ಪರಿಚಯಿಸಲು ಸಿಟಿ ಬಸ್ ಮಾಲಕರ ಸಂಘ ನಿರ್ಧರಿಸಿದ್ದು, ಬಸ್ ಸಂಚಾರ ಆರಂಭಿಸಿದ ಬಳಿಕ ಕೆಲವೇ ದಿನಗಳಲ್ಲಿ ಈ ನೂತನ ವ್ಯವಸ್ಥೆ ಜಾರಿಗೆ ಬರಲಿದೆ. ಮಂಗಳೂರು ನಗರದಲ್ಲಿ ಸುಮಾರು 350 ಸಿಟಿ ಬಸ್ ಗಳು ವಿವಿಧ ರೂಟ್ ಗಳಲ್ಲಿ ಸಂಚರಿಸುತ್ತಿದ್ದು ಈ ಎಲ್ಲಾ ಬಸ್ಗಳಲ್ಲಿ ಈ ಸ್ಮಾರ್ಟ್ ಕಾರ್ಡ್ ಸದ್ಬಳಕೆ ಮಾಡಿಕೊಳ್ಳಬಹುದಾಗಿದೆ.
ಅಲ್ಲದೆ ಹೊಸ ಸ್ಮಾರ್ಟ್ ಕಾರ್ಡ್ ಪಡೆಯಲು ಪ್ರಯಾಣಿಕರು ಯಾವುದೇ ರೀತಿಯ ಶುಲ್ಕ ಪಾವತಿಸಬೇಕಾಗಿಲ್ಲ. ನಗರದ ಸ್ಟೇಟ್ ಬ್ಯಾಂಕ್ ಬಸ್ ನಿಲ್ದಾಣ ಸೇರಿದಂತೆ ವಿವಿಧೆಡೆ ಔಟ್ ಲೆಟ್ ಮಾಡಲಾಗಿದ್ದು , ಅಲ್ಲಿ ಪ್ರಯಾಣಿಕರು ಆಧಾರ್ ಕಾರ್ಡ್ ಮಾಹಿತಿ ನೀಡಿ ಉಚಿತವಾಗಿ ಪಡೆಯಬಹುದಾಗಿದೆ. ಇದಕ್ಕೆ ಪ್ರಯಾಣಿಕರು ಟಾಪ್ ಅಪ್ ರೀಚಾರ್ಚ್ ಮಾಡಿಸಿಕೊಳ್ಳಬೇಕಾಗುತ್ತದೆ. ಖಾತೆಯಲ್ಲಿದ್ದ ಹಣಕ್ಕೆ ವ್ಯಾಲಿಡಿಟಿ ಇರುವುದಿಲ್ಲ.
ಪ್ರಯಾಣಿಕರು ಬಸ್ ಸಂಚಾರದ ವೇಳೆ ನಿರ್ವಾಹಕನಿಗೆ ಕಾರ್ಡ್ ನೀಡಿದರಾಯಿತು. ಪ್ರಯಾಣಿಕ ಹತ್ತಿದ ಮತ್ತು ಇಳಿಯುವ ಸ್ಥಳವನ್ನು ನಿರ್ವಾಹಕ ಇಟಿಎಂ ನಲ್ಲಿ ನಮೂದು ಮಾಡಿ ಈ ಯಂತ್ರಕ್ಕೆ ಈ ಕಾರ್ಡ್ ಮುಟ್ಟಿಸಿದರೆ ಕಾರ್ಡ್ ಖಾತೆಯಲ್ಲಿದ್ದ ಹಣ ಕಡಿತಗೊಳ್ಳುತ್ತದೆ.