ಉಡುಪಿ, ಮೇ 28 (Daijiworld News/MSP): ಲಾಕ್ ಡೌನ್ ನಿಂದಾಗಿ ದೇವಸ್ಥಾನ, ಮಸೀದಿ, ಚರ್ಚ್ ಗಳನ್ನು ಮುಚ್ಚಲಾಗಿತ್ತು. ಆದರೆ ನಾಲ್ಕನೇ ಹಂತದ ಲಾಕ್ ಡೌನ್ ನಲ್ಲಿ ಬಹುತೇಕ ಚಟುವಟಿಕೆಗಳಿಗೆ ವಿನಾಯಿತಿ ನೀಡಲಾಗಿದೆ. ಈ ಬೆನ್ನಲ್ಲೇ ಇದೀಗ ದೇವಾಲಯ, ಚರ್ಚ್, ಮಸೀದಿ ತೆರೆಯಲು ಅವಕಾಶ ನೀಡಲು ಸರ್ಕಾರ ಮುಂದಾಗಿದೆ. ಜೂನ್ 1ರಿಂದ ಇವುಗಳ ಬಾಗಿಲು ತೆರೆಯಲು ಸರ್ಕಾರ ಅವಕಾಶ ಮಾಡಿಕೊಡಲಾಗಿದೆ.
ಸರ್ಕಾರ ಅವಕಾಶ ನೀಡಿದ್ದರೂ ಉಡುಪಿ ಕೃಷ್ಣ ಮಠದಲ್ಲಿ ಇನ್ನೂ ಮುಂದಿನ 15 ದಿನಗಳ ಕಾಲ ಭಕ್ತರ ದರ್ಶನಕ್ಕೆ ಅವಕಾಶವಿಲ್ಲ ಎಂದು ಪರ್ಯಾಯ ಅದಮಾರು ಮಠ ತಿಳಿಸಿದೆ. ಮುಂದಿನ 10-15 ದಿನದಲ್ಲಿ ಪರಿಸ್ಥಿತುಯನ್ನು ಅವಲೋಕಿಸಿ ನಂತರ ಭಕ್ತರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಮಠಾಧೀಶರಾದ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮತ್ತು ಶ್ರೀ ಈಶಪ್ರಿಯ ತೀರ್ಥರು ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇತರ ದೇವಸ್ಥಾನಗಳಲ್ಲಿ ದೇವರ ದರ್ಶನ ವ್ಯವಸ್ಥೆ ಕಲ್ಪಿಸಿದರೂ, ಶ್ರೀಕೃಷ್ಣ ಮಠದಲ್ಲಿ ಅಷ್ಟ ಮಠದ ಯತಿಗಳೇ ಪೂಜೆ ನಡೆಸುವ ಕ್ರಮ ಇದೆ. ಹಾಗಾಗಿ ಒಳಗಿನವರಿಗೆ ಏನಾದರೂ ತೊಂದರೆ ಆದರೆ ಪದ್ಧತಿಗೆ ಭಂಗ ಬರುವಂತಹ ಸಂದರ್ಭಗಳು ಇರುತ್ತವೆ. ಹಾಗಾಗಿ ಮುಂದಿನ ದಿನಗಳಲ್ಲಿ ಪರಿಸ್ಥಿತಿ ಅವಲೋಕಿಸಿ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.