ಮಂಗಳೂರು, ಮೇ 28 (DaijiworldNews/SM): ನಗರದಲ್ಲಿ ಕ್ವಾರೆಂಟೈನ್ ನಲ್ಲಿದ್ದ ಗರ್ಭಿಣಿ ಹೊಟ್ಟೆಯಲ್ಲೇ ಮಗು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಭಾಗ್ ನ ಖಾಸಗಿ ಅಪಾರ್ಟ್ ಮೆಂಟ್ ಗೆ ಮಂಗಳೂರು ಮಹಾನಗರ ಪಾಲಿಕೆ ನೋಟಿಸ್ ಜಾರಿಗೊಳಿಸಿದೆ.
ಶಿವಭಾಗ್ ನ ಶಿವದೀಪ್ ಅಪಾರ್ಟ್ ಮೆಂಟ್ ಗೆ ನೋಟೀಸ್ ಜಾರಿಯಾಗಿದೆ. ಇನ್ನು ಮೂರು ದಿನಗಳ ಒಳಗೆ ಸೂಕ್ತ ಸಮಜಾಯಿಷಿ ನೀಡಲು ಸೂಚನೆ ನೀಡಲಾಗಿದೆ. ತಕ್ಷಣ ಮಹಿಳೆಗೆ ಅಪಾರ್ಟ್ ಮೆಂಟ್ ಪ್ರವೇಶಕ್ಕೆ ಅವಕಾಶ ನೀಡಲು ಸೂಚನೆ ನೀಡಲಾಗಿದೆ. ತಪ್ಪಿದಲ್ಲಿ ಅಪಾರ್ಟ್ ಮೆಂಟ್ ಅಸೋಸಿಯೇಷನ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಲಾಗಿದೆ.
ಮೇ.12ರಂದು ಗರ್ಭಿಣಿ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದರು. ಸರಕಾರದ ನಿಯಮದಂತೆ ಅವರು ಕ್ವಾರಂಟೈನ್ ಗೆ ಒಳಪಟ್ಟಿದ್ದರು. ಅವರ ಮೊದಲ ಕೋವಿಡ್ ಟೆಸ್ಟ್ ರಿಪೋರ್ಟ್ ನೆಗೆಟಿವ್ ಬಂದಿತ್ತು. ಬಳಿಕ ಅಪಾರ್ಟ್ ಮೆಂಟ್ ಗೆ ತೆರಳಲು ಅವರು ಬಯಸಿದ್ದರು. ಆದರೆ ಅಪಾರ್ಟ್ ಮೆಂಟ್ ಅಸೋಸಿಯೇಷನ್ ಪ್ರವೇಶ ನಿರಾಕರಿಸಿತ್ತು. ಹೀಗಾಗಿ ಸೂಕ್ತ ಚಿಕಿತ್ಸೆ ಸಿಗದೇ ಮಗು ಹೊಟ್ಟೆಯಲ್ಲೇ ಸಾವನ್ನಪ್ಪಿದೆ ಎಂದು ತಿಳಿದುಬಂದಿದೆ. ಈ ಹಿನ್ನೆಲೆಯಲ್ಲಿ ಅಪಾರ್ಟ್ ಮೆಂಟ್ ಗೆ ನೋಟೀಸ್ ಜಾರಿಗೊಳಿಸಲಾಗಿದೆ.