ಮೂಡುಬಿದಿರೆ ಸೆ19: ಮಂಗಳೂರು - ಮೂಡುಬಿದಿರೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊಂಡ ಗುಂಡಿಗಳೆದ್ದಿದ್ದು ವಾಹನ ಸಂಚಾರಕ್ಕೆ ಆಯೋಗ್ಯವಾಗಿದೆ. ಒಂದು ವೇಳೆ ಇದನ್ನು ಅಕ್ಟೋಬರ್ 10ರ ಒಳಗಾಗಿ ದುರಸ್ಥಿಪಡಿಸದಿದ್ದಲ್ಲಿ ರಸ್ತೆ ತಡೆ ನಡೆಸಿ ವಿವಿಧ ಸಂಘಟನೆಗಳ ಸಹಯೋಗದೊಂದಿದೆ ಮೂಡುಬಿದಿರೆಯಿಂದ ಮಂಗಳೂರಿಗೆ ಪಾದಯಾತ್ರೆ ನಡೆಸುವುದಾಗಿ ವಿಧಾನ ಪರಿಷತ್ ಮುಖ್ಯ ಸಚೇತಕ ಐವನ್ ಡಿಸೋಜ ಹೇಳಿದರು.
ಇಂದು ಮೂಡುಬಿದರೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಹೆದ್ದಾರಿ ಯೋಜನೆನ್ನು ಜಾರಿಗೊಳಿಸಲು ನಿರ್ಧರಿಸಿದ್ದು ಕಾಮಗಾರಿಯ ಯೋಜನೆ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿದೆ. ಚತುಷ್ಪಥ ರಸ್ತೆ ನಿರ್ಮಾಣ ಯೋಜನೆಯಡಿ ರಸ್ತೆಯು ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬ ಬಗ್ಗೆ ಇನ್ನೂ ಸ್ಪಷ್ಟ ತೀರ್ಮಾನ ಕೈಗೊಂಡಿಲ್ಲ. ಭೂ ಸ್ವಾಧೀನ ಪ್ರಕ್ರಿಯೆಯೂ ಕೈಗೊಂಡಿಲ್ಲ. ಹಾದು ಹೋಗುವ ಮಾರ್ಗದ ಕುರಿತು ಅಧಿಕಾರಿಗಳು ಮಾರ್ಗದ ಸ್ಥೂಲ ನಕಾಶೆಯನ್ನು ತಯಾರಿಸಿದ್ದರೂ ಬಿಜೆಪಿ ನಾಯಕರು ಅವರಿಗೆ ಸಂಬಂಧ ಪಟ್ಟವರ ಜಾಗವನ್ನು ಉಳಿಸಲು ಅಧಿಕಾರಿಗಳ ಮೇಲೆ ಒತ್ತಡ ಹೇರಿ ಆಗಾಗ ಮಾರ್ಗದ ಪಥವನ್ನು ಬದಲಾಯಿಸುತ್ತಿದ್ದಾರೆ ಎಂದು ಕಿಡಿಕಾರಿದರು.
ಈ ರಸ್ತೆಯನ್ನು ಸದ್ಯ ಸುಗಮ ಸಂಚಾರಕ್ಕೆ ಯೋಗ್ಯವಾಗುವ ನಿಟ್ಟಿನಲ್ಲಿ ನಿರ್ಮಾಣ ಮಾಡಲು 18ಕೋಟಿ ರೂ. ಅಗತ್ಯವಿದ್ದು ಕೇಂದ್ರ ಸರ್ಕಾರ ಕೂಡಲೇ ಹಣ ಬಿಡುಗಡೆಗೊಳಿಸಬೇಕು. ಈ ಕುರಿತು ಭೂ ಸಾರಿಗೆ ಸಚಿವ ನಿತಿನ್ ಗಡ್ಕರಿ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ದೇಶಕರಿಗೆ ಪತ್ರ ಬರೆದಿರುವುದಾಗಿ ಅವರು ತಿಳಿಸಿದರು.
ಈ ಹೆದ್ದಾರಿ ಯೋಜನೆಯ ಕಾಮಗಾರಿ ವಿಳಂಬಕ್ಕೆ ಯುಪಿಎ ಸರ್ಕಾರವೇ ಕಾರಣವೆಂಬ ಸಂಸದೆ ಶೋಭಾ ಕರಂದ್ಲಾಜೆಯವರ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಅವರು ಮಂಗಳೂರು ಲೋಕಸಭಾ ಕ್ಷೇತ್ರವನ್ನು ಕಳೆದ 25 ವರ್ಷಗಳಿಂದ ಬಿಜೆಪಿ ಸಂಸದರೆ ಪ್ರತಿನಿಧಿಸುತ್ತಿದ್ದಾರೆ. ಡಿ.ವಿ. ಸದಾನಂದ ಗೌಡರು ರಾಜ್ಯದಲ್ಲಿ ಮುಖ್ಯಮಂತ್ರಿ, ಕೇಂದ್ರದಲ್ಲಿ ಸಚಿವರಾಗಿದ್ದರು. ಶೋಭಾ ಕರಂದ್ಲಾಜೆ ಈ ಹಿಂದೆ ರಾಜ್ಯ ಸಂಪುಟದಲ್ಲಿ ಸಚಿವರಾಗಿ ಪ್ರಸ್ತುತ ಸಂಸದರಾಗಿದ್ದಾರೆ. ಇಷ್ಟೆಲ್ಲಾ ಪ್ರಭಾವಿ ನಾಯಕರು ಯಾಕೆ ಹೆದ್ದಾರಿ ಕಾಮಗಾರಿ ನಡೆಸಲು ಆಸಕ್ತಿ ತೋರಿಲ್ಲ ಎಂದು ಅವರು ಪ್ರಶ್ನಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ ಮಾಜಿ ಸದಸ್ಯ ಲಾಜರಸ್ ಡಿಕೋಸ್ತ, ಕೆ.ಪಿ.ಸಿಸಿ ಸದಸ್ಯ ಗುರುರಾಜ್, ಮುಖಂಡರುಗಳಾದ ಬಾಲದತ್ತ್ ಆಳ್ವ, ವಿಶ್ವನಾಥ್ ಶೆಟ್ಟಿ, ಗೋಪಿನಾಥ್ ಪಡಂಗ, ಮೈಯದಿ, ಸಾಹುಲ್ ಹಮೀದ್, ಹರೀಶ್ ಪಿ. ರಿಚರ್ಡ್, ನವಾಜ್ ಬೂನಡ್ಕ,ಶಶಿಕಾಂತ್ ಶೆಟ್ಟಿ, ವಿಲ್ಫೆಡ್ ಮೆಂಡೊನ್ಸಾ ಮತ್ತಿತರರು ಉಪಸ್ಥಿತರಿದ್ದರು.