ಮಂಗಳೂರು, ಮಾ 24 : ಪತ್ರಕರ್ತರಲ್ಲಿ ಕೆಲವು ಸಂದರ್ಭ ಸೈನಿಕರಂತೆ ಕೆಲಸ ಮಾಡುವ ಧೈರ್ಯ, ಕ್ಷಮತೆ ಇರಬೇಕು ಎಂದು ಹೆಸರಾಂತ ಪತ್ರಕರ್ತೆ ಅನಿತಾ ಪಿಂಟೋ ಅವರು ಹೇಳಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಅತ್ಯುತ್ತಮ ಗ್ರಾಮೀಣ ವರದಿಗಾರಿಕೆಗೆ ನೀಡುವ ಪದ್ಯಾಣ ಗೋಪಾಲಕೃಷ್ಣ ಸ್ಮರಣಾರ್ಥ ಪ್ರಶಸ್ತಿಯನ್ನು ಪ್ರಶಾಂತ್ ಎಸ್ ಸುವರ್ಣ ಅವರಿಗೆ ಪ್ರದಾನ ಮಾಡಿ ಅವರು ಮಾತನಾಡಿದರು. ಸಮಾಜದಲ್ಲಿ ಪತ್ರಕರ್ತರು ಕೆಲವು ಸಂದರ್ಭಗಳಲ್ಲಿ ಸೈನಿಕರಂತೆ ಕೆಲಸ ಮಾಡಬೇಕು. ಕೆಲವೊಮ್ಮೆ ಅವರಿಗೂ ಮುಂಚಿತವಾಗಿ ಸ್ಥಳಕ್ಕೆ ತಲುಪಿ ಕಾರ್ಯ ನಿರ್ವಹಿಸುವ, ಧೈರ್ಯ, ಸ್ಥಿತಪ್ರಜ್ಞತೆ, ಕ್ಷಮತೆಯನ್ನು ಪತ್ರಕರ್ತರು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ದಕ್ಷಿಣ ಭಾರತದಲ್ಲಿ ಸಂಭವಿಸಿದ ಸುನಾಮಿಯ ಸಂದರ್ಭದಲ್ಲಿ ಮತ್ತು ಗುಜರಾತ್ ನಲ್ಲಿ ಸಂಭವಿಸಿದ ಭೀಕರ ಭೂಕಂಪದ ವೇಳೆ ತುರ್ತು ಕಾರ್ಯಾಚರಣೆ ನಡೆಸಲು ಸರಕಾರಿ ಯಂತ್ರಗಳು ಆಗಮಿಸುವ ಮೊದಲೆ ಯಾವುದೇ ಅಪಾಯವನ್ನು ಲೆಕ್ಕಿಸದೆ ಪತ್ರಕರ್ತರು ಕಾರ್ಯನಿರ್ವಹಿಸುತ್ತಿರುವುದನ್ನು ನಾನು ಗಮನಿಸಿದ್ದೇನೆ. ಆದ್ದರಿಂದ ಸಮಾಜದ ಅಭಿವೃದ್ಧಿಯಲ್ಲಿ ಮಾಧ್ಯಮಗಳ ಮಹತ್ತರ ಪಾತ್ರವಿದೆ. ಪತ್ರಕರ್ತರು ಸಮಾಜಮುಖಿಯಾಗಿರಬೇಕು. ಮಾತ್ರವಲ್ಲ ಪರಸ್ಪರ ಸಂಬಂಧ ಬೆಸೆಯುವ ವರದಿಗಳನ್ನು ನೀಡುವಲ್ಲಿ ಹೆಚ್ಚಿನ ಗಮನ ನೀಡಬೇಕು. ಪತ್ರಕರ್ತರು ಮಾಡುವ ವರದಿಗಳು ಸಮಾಜಕ್ಕೆ ಬೆಳಕು ನೀಡಬಲ್ಲವು ಎಂದು ಅನಿತಾ ಪಿಂಟೋ ಹೇಳಿದರು.