ಉಪ್ಪಿನಂಗಡಿ, ಮೇ 29 (DaijiworldNews/PY) : ಹೊಟೇಲ್ ಕಾರ್ಮಿಕರೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿದ್ದು, ಆ ಸಂದರ್ಭ ಅವರು ಜ್ವರದಿಂದ ಬಳಲುತ್ತಿದ್ದರು ಎಂಬ ವದಂತಿ ಹಬ್ಬಿದ್ದ ಕಾರಣ ಕೊರೊನಾ ಭಯದಿಂದಾಗಿ ಯಾರೂ ಕೂಡಾ ಶವದ ಬಳಿ ಬರಲು ಒಪ್ಪದ ಘಟನೆ ಪುತ್ತೂರು ತಾಲೂಕು 34ನೇ ನೆಕ್ಕಿಲಾಡಿ ಗ್ರಾಮದ ದರ್ಬೆಯಲ್ಲಿ ಬುಧವಾರ ನಡೆದಿದೆ.
ಉಡುಪಿ ಮೂಲದ 56 ವರ್ಷ ವ್ಯಕ್ತಿಯೋರ್ವ ಮನೆಯವರಿಂದ ದೂರವಾಗಿದ್ದು, ಉಪ್ಪಿನಂಗಡಿಯ ಹೊಟೇಲ್ವೊಂದರಲ್ಲಿ ಕಾರ್ಮಿಕರಾಗಿದ್ದರು. ಪ್ರಸ್ತುತ ಹೊಟೇಲ್ ವ್ಯವಹಾರ ಇಲ್ಲದ ಕಾರಣ ಅವರು ನೆಕ್ಕಿಲಾಡಿಯ ಪರಿಚಯಸ್ಥರ ಮನೆಯಲ್ಲಿದ್ದರು. ಅವರಿಗೆ ಕುಡಿತದ ಚಟವಿದ್ದು, ಅವರು ಬುಧವಾರ ಮಧ್ಯಾಹ್ನದ ವೇಳೆಗೆ ಮನೆಯಲ್ಲಿಯೇ ಕುಸಿದು ಬಿದ್ದಿದ್ದಾರೆ ಎನ್ನಲಾಗಿದೆ.
ಈ ನಡುವೆ ಅವರು ಜ್ವರದಿಂದ ಬಳಲುತ್ತಿದ್ದರು ಎಂದು ಯಾರೋ ವದಂತಿ ಹಬ್ಬಿಸಿದ್ದು, ಈ ಮಾಹಿತಿ ಪೊಲೀಸ್ ಠಾಣೆಗೂ ತಲುಪಿತ್ತು. ತಂದೆ ಮೃತಪಟ್ಟ ವಿಷಯ ತಿಳಿದು ಅವರ ಪುತ್ರನೂ ಸಂಜೆಯ ವೇಳೆ ನೆಕ್ಕಿಲಾಡಿಗೆ ಬಂದಿದ್ದರು. ಆದರೆ, ಯಾರೂ ಸಹಾಯಕ್ಕೆ ಬಾರದೇ ಇದ್ದು, ಶವ ಸಂಸ್ಕಾರವನ್ನೂ ಮಾಡಲೂ ಆಗದೇ, ಶವವನ್ನು ಊರಿಗೆ ಸಾಗಿಸಲು ಆಗದೇ, ಅಸಹಾಯಕರಾಗಿ ಪೊಲೀಸ್ ಠಾಣೆಯ ಬಾಗಿಲಿನಲ್ಲಿ ಕಾಯುವ ಪರಿಸ್ಥಿತಿ ಎದುರಾಯಿತು. ಅಲ್ಲದೇ, ಕಂದಾಯ, ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಫೋನ್ ಕರೆ ಮಾಡಿದರು ಪ್ರಯೋಜನವಾಗಲಿಲ್ಲ.
ನಂತರ ಮೃತರ ಪುತ್ರನ ಸಂಕಷ್ಟವನ್ನು ತಿಳಿದ ಉಪ್ಪಿನಂಗಡಿ ಎಸ್ಐ ಈರಯ್ಯ ಅವರು, ಖಾಸಗಿ ಆಂಬುಲೆನ್ಸ್ ಚಾಲಕನ ಮನವೊಲಿಸಿ, ಆತನಿಗೆ ಪೊಲೀಸರಿಗೆ ನೀಡಲಾದ ಪಿಪಿಇ ಉಡುಪನ್ನು ತೊಡಿಸಿ ಬಳಿಕ ಶವವನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಸಾಗಿಸುವಂತೆ ಮಾಡಿದರು. ನಂತರ ಮೃತನ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ಫಲಿತಾಂಶ ಬಂದ ನಂತರ ಅಂತ್ಯಕ್ರಿಯೆ ನಡೆಯಲಿದೆ.