ಉಡುಪಿ, ಮೇ 29 (Daijiworld News/MSP): ಪೊಲೀಸ್ ಠಾಣೆಯ ಸಮೀಪದಲ್ಲೇ ಸಶಸ್ತ್ರ ಮೀಸಲು ಪಡೆಯ ಎಎಸ್ಐ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆಯ ಅಮಾಸೆಬೈಲಿನಲ್ಲಿ ನಡೆದಿದೆ.
ಅಮಾಸೆಬೈಲು ಪೊಲೀಸ್ ಠಾಣೆಯ ಭದ್ರತೆಗಾಗಿ ನಿಯೋಜನೆಗೊಂಡಿದ್ದ ಮಲ್ಲಿಕಾರ್ಜುನ್ ಗುಬ್ಬಿ (56) ಇಂದು ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು.
ಇವರು ಮೂಲತಃ ಕಲಬುರಗಿಯ ನೌರುಗಂಜ್ ನಿವಾಸಿಯಾಗಿದ್ದು, ಮೇ 16 ರಂದು ನಕ್ಸಲ್ ಪೀಡಿತ ಅಮಾಸೆಬೈಲು ಪೊಲೀಸ್ ಠಾಣೆಗೆ ಭದ್ರತೆಗಾಗಿ ನಿಯೋಜನೆಗೊಂಡಿದ್ದರು. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ (ಕೆಎಸ್ಆರ್ಪಿ) ಪಡೆಯ ಆರ್ಎಸ್ಐ ಸಿಬ್ಬಂದಿಯಾಗಿದ್ದ ಮಲ್ಲಿಕರ್ಜುನ್ ಮೇ 15 ರಂದು ನಕ್ಸಲ್ ಚಟುವಟಿಕೆ ಇರುವ ಅಮಾಸೆಬೈಲು ಪೊಲೀಸ್ ಠಾಣೆಗೆ ಆಗಮಿಸಿದ್ದರು. ಗುರುವಾರ ರಾತ್ರಿ ಅವರು ಕ್ವಾರ್ಟರ್ಸ್ನಲ್ಲಿ ಮಲಗಲು ಹೋಗಿದ್ದು ಬೆಳಿಗ್ಗೆ ಅಲ್ಲಿ ಇರಲಿಲ್ಲ. ಶೋಧ ನಡೆಸಿದ ಅವರ ಪೊಲೀಸ್ ಠಾಣೆಯ ಸಮೀಪ ಮರಕ್ಕೆ ನೇಣು ಬಿಗಿದುಕೊಂಡಿರುವುದು ಪತ್ತೆಯಾಗಿದೆ.
ಮಲ್ಲಿಕಾರ್ಜುನ್ ಕಳೆದ 29 ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಶನಿವಾರ ಮಲ್ಲಿಕಾರ್ಜುನ್ ಮುನಿರಾಬಾದ್ ಗೆ ತೆರಳುವವರಿದ್ದರು. ಇವರು ಅನಾರೋಗ್ಯದ ಕಾರಣಕ್ಕೆ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.