ಬೆಳ್ತಂಗಡಿ, ಮೇ 29 (Daijiworld News/MSP): ಕೆಲ ದಿನಗಳ ಹಿಂದೆ ಕುತ್ಲೂರು ಸನಿಹದ ಕುಕ್ಕುಜೆಯ ಸೇತುವೆ ಕುಸಿದು ಬಿದ್ದಿದ್ದು, ಅಲ್ಲಿ ನೂತನ ಸೇತುವೆ ನಿರ್ಮಾಣಕ್ಕೆ ರೂ. 3 ಕೋಟಿಯ ಅಂದಾಜು ವೆಚ್ಚದ ಪಟ್ಟಿಯನ್ನು ಸಿದ್ಧ ಮಾಡಲಾಗಿದೆ ಎಂದು ಶಾಸಕ ಹರೀಶ ಪೂಂಜ ತಿಳಿಸಿದರು.
ಅವರು ಶುಕ್ರವಾರ ತಾ.ಪಂ. ಸಭಾಂಗಣದಲ್ಲಿ ತಾ.ಪಂ.ಸದಸ್ಯರೊಂದಿಗೆ ಮುಂಬರುವ ಮಳೆಗಾಲದ ಪೂರ್ವಭಾವಿ ಕಾಮಗಾರಿಗಳ ಬಗ್ಗೆ ಚರ್ಚಿಸಿದರು. ಕುಕ್ಕುಜೆ ಸೇತುವೆಯ ಕಾಮಗಾರಿಯನ್ನು ಕೂಡಲೇ ಅಥವಾ ಮಳೆಗಾಲ ಮುಗಿದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವುದು. ಈ ಬಗ್ಗೆ ಸಚಿವ ಈಶ್ವರಪ್ಪನವರಲ್ಲಿ ಗುರುವಾರ ಚರ್ಚಿಸಿದ್ದೇನೆ. ಅವರು ಎಡ್ವಾನ್ಸ್ ವರ್ಕ್ ಗೆ ಅನುಮತಿ ನೀಡಿದ್ದಾರೆ. ತಾಲೂಕಿನ ನಾದುರಸ್ತಿಯಲ್ಲಿರುವ ಎಲ್ಲಾ ರಸ್ತೆಗಳಿಗೆ ತಾತ್ಕಾಲಿಕ ತೇಪೆ ಕಾರ್ಯವನ್ನಷ್ಟೇ ಸದ್ಯ ಮಾಡಲಾಗುವುದು. ಸಂಪೂರ್ಣ ಡಾಮರೀಕರಣವನ್ನು ಮಳೆಗಾಲದ ನಂತರರವಷ್ಟೇ ಕೈಗೊಳ್ಳಲಾಗುವುದು. ಚರಂಡಿ ಸುವ್ಯವಸ್ಥೆಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ನಾರಾವಿ - ಗುರುವಾಯನಕೆರೆ ರಾಜ್ಯ ಹೆದ್ದಾರಿಯ ಅಗಲೀಕರಣ ಹಾಗು ಡಾಮರೀಕರಣ ಮಳೆಗಾಲದ ಬಳಿಕ ಆರಂಭಗೊಳ್ಳಲಿದೆ ಎಂದರು.
ಬ್ಯಾಡ್ಜ್ ಇಲ್ಲದ ರಿಕ್ಷಾ ಚಾಲಕರಿಗೂ ರೂ. 5000 ಸಿಗುವಂತೆ ಆಗಲು ರೂಪುರೇಷೆ ತಯಾರಿಸಲಾಗಿದೆ. ಹೀಗಾಗಿ ರಿಕ್ಷಾ ಚಾಲಕರು ಭಾರತೀಯ ಮಜ್ದೂರ್ ಸಂಘದ ಕಚೇರಿಯಲ್ಲಿ ಹೆಸರುಗಳನ್ನು ನೋಂದಣಿ ಮಾಡಿಸಬೇಕು. ಕಾರ್ಮಿಕ ಇಲಾಖೆಯ ಮೂಲಕ ನೋಂದಣಿಯಾಗದೆ ಇರುವ ಇನ್ನಿತರ ಕಾರ್ಮಿಕರಿಗಾಗಿ ಸೇವಾಸಿಂಧು ತಂತ್ರಾಂಶದ ಮೂಲಕ ಹೆಸರು ನೋಂದಾಯಿಸಿಕೊಳ್ಳುವಂತಾಗಲು ಸರಕಾರ ಸಿದ್ಧತೆ ಮಾಡುತ್ತಿದೆ ಎಂದರು.
ಜೂ. 25 ರಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆ ಆರಂಭವಾಗಲಿದ್ದು ಸದಸ್ಯರ ಕಾರ್ಯವ್ಯಾಪ್ತಿಯಲ್ಲಿನ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಹಾಗು ಪೋಷಕರಿಗೆ ಧೈರ್ಯ, ಸ್ಥೈರ್ಯ ತುಂಬುವ ಕೆಲಸ ನಾವೆಲ್ಲರೂ ಮಾಡಬೇಕಲ್ಲದೆ ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಿಗೆ ತೆರಳಲು ಅನುಕೂಲ ಮಾಡಿಕೊಡಬೇಕು ಎಂದು ಸದಸ್ಯರಲ್ಲಿ ವಿನಂತಿಸಿದರು.
ಕೊರೋನಾ ಸಮಯದಲ್ಲಿ ತಾಲೂಕಿನ ಜನರ ಆರೋಗ್ಯದ ಬಗ್ಗೆ ಕಾಳಜಿ ತೋರಿಸುತ್ತಿರುವ ಎಲ್ಲಾ ಜನ ಪ್ರತಿನಿಧಿಗಳಿಗೆ ಅಭಿನಂದನೆಗಳನ್ನು ತಿಳಿಸಿದ ಅವರು, ಇದುವರೆಗೆ ವೈದ್ಯರು, ನರ್ಸ್ ಗಳು, ಆಶಾ- ಅಂಗನವಾಡಿ ಕಾರ್ಯಕರ್ತೆಯರು,ಪೋಲಿಸರು, ಗೃಹ ರಕ್ಷಕ ದಳದವರು ಯೋಧರಂತೆ ಹೋರಾಡಿದ್ದಾರೆ, ಇದೀಗ ತಾಲೂಕಿನ ಅಧ್ಯಾಪಕರು ಸಜ್ಜಾಗಿದ್ದಾರೆ ಅವರಿಗೆಲ್ಲಾ ನಾವು ಸಹಕಾರ ನೀಡಬೇಕು ಎಂದು ಕೋರಿದರು.