ಮಂಗಳೂರು, ಮೇ 29 (DaijiworldNews/SM): ಕ್ವಾರಂಟೈನ್ ನಲ್ಲಿದ್ದ ಗರ್ಭಿಣಿಗೆ ಸೂಕ್ತ ಚಿಕಿತ್ಸೆ ಸಿಗದೆ ಗರ್ಭದಲ್ಲೇ ಮಗು ಸಾವಿಗೀಡಾದ ಪ್ರಕರಣಕ್ಕೆ ಸಂಬಂಧಿಸಿದಂತೆ, ಪ್ರಕರಣದ ಸತ್ಯಾಸತ್ಯತೆ ಪರಿಶೀಲನೆಗೆ ಸಮಿತಿ ರಚನೆ ಮಾಡಿ ದ.ಕ. ಜಿಲ್ಲಾಧಿಕಾರಿಗಳು ಆದೇಶ ನೀಡಿದ್ದಾರೆ.
ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕರಾದ ಸ್ನೇಹಲ್ ಅವರ ಅಧ್ಯಕ್ಷತೆಯಲ್ಲಿ 9 ಮಂದಿಯ ವಿಚಾರಣಾ ಸಮಿತಿ ರಚಿಸಲಾಗಿದ್ದು, ಶೀಘ್ರದಲ್ಲೇ ಸತ್ಯಾಸತ್ಯತೆಯ ವರದಿ ನೀಡುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ.
ಇನ್ನು ಮೇ 12ರಂದು ಗರ್ಭಿಣಿ ವಿದೇಶದಿಂದ ಬಂದಿದ್ದರು. ವಿದೇಶದಿಂದ ಬಂದ ಹಿನ್ನೆಲೆ ಅವರನ್ನು ಕ್ವಾರಂಟೈನ್ ಗೆ ಒಳಪಡಿಸಲಾಗಿತ್ತು. ಕ್ವಾರಂಟೈನ್ ನಲ್ಲಿದ್ದ ವೇಳೆ ಅವರ ವರದಿ ನೆಗೆಟಿವ್ ಬಂದಿದೆ. ಈ ಕಾರಣದಿಂದ ಅಪಾರ್ಟ್ ಮೆಂಟ್ ಹಾಗೂ ಖಾಸಗಿ ಆಸ್ಪತ್ರೆಗೆ ದಾಖಲಾಗಲು ಗರ್ಭಿಣಿ ಬಯಸಿದ್ದರು. ಆದರೆ ಅದಕ್ಕೆ ಅವಕಾಶ ಸಿಕ್ಕಿರಲಿಲ್ಲ. ಈ ಕಾರಣದಿಂದಾಗಿ ಲಾಡ್ಜ್ ನಲ್ಲೇ ಉಳಿದುಕೊಂಡಿದ್ದರು.
ಈ ಸಂದರ್ಭದಲ್ಲಿ ಅವರಿಗೆ ಸೂಕ್ತ ಚಿಕಿತ್ಸೆ ಸಿಗದೆ ಮಗು ಸಾವಿಗೀಡಾಗಿದೆ ಎಂಬ ಆರೋಪ ವ್ಯಕ್ತವಾಗಿದೆ. ಇನ್ನು ಈ ವಿಚಾರಕ್ಕೆ ಸಂಬಂಧಿಸಿದಂತೆ, ಹಲವು ದೂರುಗಳು ಬಂದ ಹಿನ್ನೆಲೆ ಜಿಲ್ಲಾಡಳಿತ ಕಾರ್ಯಪ್ರವೃತವಾಗಿ ಈ ಕ್ರಮ ಕೈಗೊಂಡಿದೆ ಎಂದು ತಿಳಿದುಬಂದಿದೆ.