ಮಂಗಳೂರು, ಮಾ 24: ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಹಿರಿಯ ಮುಖಂಡ ಜನಾರ್ದನ ಪೂಜಾರಿಗೆ ಯಾವುದೇ ಸ್ಥಾನ, ಜವಾಬ್ದಾರಿ ನೀಡಿದರೂ ಅದಕ್ಕೆ ನಮ್ಮ ಒಪ್ಪಿಗೆ ಎಂದು ರಮಾನಾಥ ರೈ ಹೇಳಿದ್ದಾರೆ.
ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಗೊಂದಲ, ಭಿನ್ನಾಭಿಪ್ರಾಯಗಳಿಲ್ಲ. ರಾಹುಲ್ ಗಾಂಧಿ ಅವರಿಗೆ ಕದ್ರೋಳಿಗೆ ಹೋಗುವ ವ್ಯವಸ್ಥೆ ಮಾಡಿದ್ದು ನಾನು. ಪಕ್ಷದಲ್ಲಿ ಜನಾರ್ದನ ಪೂಜಾರಿಗೆ ಯಾವುದೇ ಸ್ಥಾನ, ಜವಾಬ್ದಾರಿ ನೀಡಿದರೂ ಅದಕ್ಕೆ ನಮ್ಮ ಒಪ್ಪಿಗೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಎಂಟು ಕ್ಷೇತ್ರಗಳಲ್ಲೂ ನಮ್ಮದೆ ಗೆಲುವು ಎಂದು ಹೇಳಿದರು.
ಕಾಂಗ್ರೆಸ್ ಪಕ್ಷದ ಬಗ್ಗೆ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪ್ರಧಾನಿ ಮೋದಿಗಿಂತ ರಾಹುಲ್ ಗಾಂಧಿ ಒಂದು ಹೆಜ್ಜೆ ಮುಂದೆ ಇದ್ದಾರೆ. ರಾಹುಲ್ ಗಾಂಧಿ ಸಮಾವೇಶದಲ್ಲಿ ಅದ್ಭುತವಾಗಿ ಭಾಷಣ ಮಾಡಿದ್ದು, ಕಾಂಗ್ರೆಸ್ ಯಾತ್ರೆ ಜಿಲ್ಲೆಯಲ್ಲಿ ಯಶಸ್ವಿಯಾಗಿ ನಡೆದಿದೆ ಎಂದು ಹೇಳಿದ್ದಾರೆ.