ಮಂಗಳೂರು, ಮೇ 30 (Daijiworld News/MB) : ಕೊರೊನಾ ವಾರಿಯರ್ಸ್ಗೆ ಸಂಬಳ ನೀಡದೆಯೇ ಸರ್ಕಾರ ನಿರ್ಲಕ್ಷಿಸಿದೆ ಎಂದು ಮಾಜಿ ಸಚಿವ, ಶಾಸಕ ಯುಟಿ ಖಾದರ್ ಆರೋಪಿಸಿದ್ದಾರೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊರೊನಾ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಯಾವುದೇ ಗಂಭೀರತೆ ಇಲ್ಲ. ಡಾಕ್ಟರ್ ಮತ್ತು ನರ್ಸ್ಗಳಿಗೆ ಎರಡು ತಿಂಗಳಿನಿಂದ ಸಂಬಳವಾಗಿಲ್ಲ. ಕೊರೊನಾ ಸೋಂಕಿನ ವಿರುದ್ಧವಾಗಿ ಈ ಸಂದರ್ಭದಲ್ಲಿ ಎಲ್ಲಾ ಕಡೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ವೈದ್ಯರು, ನರ್ಸ್ಗಳಿಗೆ ವೇತನ ನೀಡದೆ ಸತಾಯಿಸಿದ್ದಾರೆ. ಸರ್ಕಾರ ಕೊರೊನಾ ವಾರಿಯರ್ಸ್ನ್ನು ನಿರ್ಲಕ್ಷ್ಯ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊರೊನಾ ವಾರಿಯರ್ಸ್ಗೆಯೇ ಸಂಬಳ ನೀಡದೆ ಸತಾಯಿಸುತ್ತಿರುವ ಸರ್ಕಾರದ ಸ್ಥಿತಿ ಹೇಗಿರಬೇಡ. ಈ ಕೂಡಲೇ ಕೊರೊನಾ ವಾರಿಯರ್ಸ್ಗೆ ಸಂಬಳ ಬಿಡುಗಡೆ ಮಾಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಖಾದರ್ ಅವರು ಆಗ್ರಹಿಸಿದ್ದಾರೆ.
ನ್ಯಾಷನಲ್ ಹೆಲ್ತ್ ಮಿಷನ್ನಡಿಯಲ್ಲಿ ಬರುವ ವೈದ್ಯರು, ನರ್ಸ್,ಲ್ಯಾಬ್ ಟೆಕ್ನೀಷಿಯನ್ಸ್ ಗೆ ಸಂಬಳವಾಗಿಲ್ಲ. ರಾಜ್ಯದಲ್ಲಿ 26 ಸಾವಿರ ಕೊರೊನಾ ವಾರಿಯರ್ಸ್ಗೆ ಸಂಬಳ ನೀಡಿಲ್ಲ. ಎರಡು ತಿಂಗಳು ನಿರಂತರವಾಗಿ ವೈದ್ಯರು ಕಾರ್ಯ ನಿರ್ವಹಿಸಿದ್ದಾರೆ. ಅವರಿಗೆ ಪಿಎಂ ಕೇರ್ನಲ್ಲಿ ಸಂಗ್ರಹವಾದ ಹಣವನ್ನು ಸಂಬಳವಾಗಿ ನೀಡಲಿ ಎಂದು ಒತ್ತಾಯಿಸಿದ್ದಾರೆ.
ಹಾಗೆಯೇ ಪಿಎಂ ಫಂಡ್ನಲ್ಲಿ ಸಂಗ್ರಹವಾದ ಹಣದ ಲೆಕ್ಕ ಕೊಡಲಿ. ಯಾವುದಕ್ಕೆ ಖರ್ಚು ಮಾಡಿದ್ದಾರೆ ಎಂದು ಬಹಿರಂಗ ಮಾಡಲಿ. ಸರ್ಕಾರ ತಕ್ಷಣ ವೈದ್ಯರಿಗೆ ಸಂಬಳ ನೀಡದಿದ್ದಲ್ಲಿ ಕಾಂಗ್ರೆಸ್ನಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಇನ್ನು ಈ ಸಂದರ್ಭದಲ್ಲಿ ಐದು ರಾಜ್ಯದ ಜನರಿಗೆ ಕರ್ನಾಟಕ ಪ್ರವೇಶ ನಿಷೇಧ ವಿಚಾರಕ್ಕೆ ಸಂಬಂಧಿಸಿ ಮಾತನಾಡಿದ ಅವರು, ಒಕ್ಕೂಟ ವ್ಯವಸ್ಥೆಯಲ್ಲಿ ಸರ್ಕಾರದ ಈ ನಿರ್ಧಾರ ಸರಿಯಿಲ್ಲ.ಮಹಾರಾಷ್ಟ್ರ ದಲ್ಲಿರುವ ಕನ್ನಡಿಗರು ನಮ್ಮವರು ಅಲ್ಲವೇ? ಬೇರೆ ಬೇರೆ ರಾಜ್ಯದಲ್ಲಿರುವ ಕನ್ನಡಿಗರು ಸಂಕಷ್ಟದಲ್ಲಿದ್ದು ಅವರನ್ನು ಈ ಕರೆದುಕೊಂಡು ಬರಬೇಕು. ಕನ್ನಡಿಗರನ್ನು ಕರೆತರಲು ರೈಲಿನ ವ್ಯವಸ್ಥೆ ಮಾಡಬೇಕು. ಬೇರೆ ರಾಜ್ಯದವರು ಕರ್ನಾಟಕದಲ್ಲಿದ್ದವರನ್ನು ಕರೆದುಕೊಂಡು ಹೋಗಿದ್ದಾರೆ. ನಮಗೆ ಕನ್ನಡಿಗರನ್ನು ಕರೆದುಕೊಂಡು ಬರಲು ಯಾಕೆ ಸಾಧ್ಯ ಇಲ್ಲ? ಅವರನ್ನು ಮನೆಗೆ ಸೇರಿಸುವ ಜವಾಬ್ದಾರಿ ಸರ್ಕಾರದ ಮೇಲಿದೆ. ನಾವೇ ಕನ್ನಡಿಗರನ್ನು ರಕ್ಷಣೆ ಮಾಡದಿದ್ದರೆ, ಬೇರೆ ಯಾರು ರಕ್ಷಣೆ ಮಾಡುತ್ತಾರೆ? ಎಂದು ಪ್ರಶ್ನಿಸಿದ್ದಾರೆ.