ಉಡುಪಿ, ಮೇ 30 (Daijiworld News/MB) : ಉಡುಪಿ ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿರುವ ನಡುವೆ ಇದೀಗ ೪೫ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಶನಿವಾರ ಉಡುಪಿ ಜಿಲ್ಲೆಯಲ್ಲಿ 17 ಮಕ್ಕಳು ಸೇರಿದಂತೆ 45 ಮಂದಿ ಗುಣಮುಖರಾಗಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿ ಹೊರ ಬಂದವರಿಗೆ ಜಿಲ್ಲಾಧಿಕಾರಿಗಳು ಉಡುಗೊರೆ ನೀಡಿ ಸ್ವಾಗತ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಜಿ ಜಗದೀಶ್, ಇಂದು ಉಡುಪಿಯ ಟಿಎಂಎ ಪೈ ಆಸ್ಪತ್ರೆಯಿಂದ 17 ಮಕ್ಕಳು ಸೇರಿದಂತೆ 45 ಜನರು ಕೊರೊನಾ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮುಂದಿನ ದಿನದಲ್ಲಿ ಅವರು ಮನೆಯಲ್ಲಿ ಎಚ್ಚರದಿಂದ ಇರಬೇಕು. ಸೋಂಕು ಲಕ್ಷಣಗಳು ಕಂಡು ಬಂದಲ್ಲಿ ತಿಳಿಸಬೇಕು ಎಂದು ತಿಳಿಸಿದ್ದಾರೆ.
ಇನ್ನು ನಾಗರಿಕರು ಮಾಸ್ಕ್ ಧರಿಸಿದೇ ಓಡಾಡಿದ್ದಲ್ಲಿ ದಂಡ ವಿಧಿಸಲಾಗುವುದು, ದಂಡ ವಿಧಿಸಿದ ಬಳಿಕವೂ ಅವರು ಓಡಾಡಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಗ್ರೀನ್ ಝೋನ್ನಲ್ಲಿದ್ದ ಉಡುಪಿ ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಕೊರೊನಾ ಸೋಂಕಿತರ ಸಂಖ್ಯೆ ಅಧಿಕವಾಗುತ್ತಿದ್ದು ಈ ಪೈಕಿ ಬಹುತೇಕರು ಮಹಾರಾಷ್ಟ್ರ ಸೇರಿದಂತೆ ಹಲವು ಹೊರ ರಾಜ್ಯದಿಂದ ಬಂದವರಾಗಿದ್ದಾರೆ. ಶುಕ್ರವಾರ ಸಂಜೆಯ ವರದಿಯವರೆಗೆ ಜಿಲ್ಲೆಯಲ್ಲಿ 164 ಸೋಂಕು ಪ್ರಕರಣಗಳು ದೃಢವಾಗಿದೆ.