ಮಂಗಳೂರು, ಮಾ 25: ರೆಡ್ ಎಫ್ಎಂ ನೀಡುವ 2017 ನೇ ಸಾಲಿನ ತುಳು ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ಶನಿವಾರ ನಡೆಯಿತು.ಕನ್ನಡ ಚಲನಚಿತ್ರ ಸಂಗೀತ ನಿರ್ದೇಶಕ ಗುರುಕಿರಣ್ ಸಮಾರಂಭ ಉದ್ಘಾಟಿಸಿ, ಕನ್ನಡ ಚಲನಚಿತ್ರ ರಂಗದ ಮಾದರಿಯಲ್ಲೇ ತುಳು ಚಿತ್ರರಂಗ ಕೂಡ ಬೆಳೆಯುತ್ತಿದೆ. ತುಳುವಿನಲ್ಲಿ ಗುರುತಿಸಿದ ಅನೇಕ ಕಲಾವಿದರು ಕನ್ನಡಲ್ಲೂ ಮಿಂಚುತ್ತಿದ್ದಾರೆ. ಇದು ತುಳುನಾಡಿಗೆ ಹೆಮ್ಮೆ. ಚಲನಚಿತ್ರಗಳ ಸಂಖ್ಯೆಗಿಂತ ಹೆಚ್ಚಾಗಿ ಗುಣಮಟ್ಟಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಬೇಕು ಎಂದು ಹೇಳಿದರು.
ಆರು ವರ್ಷಗಳಲ್ಲಿ ತುಳು ಚಲನಚಿತ್ರ ಕ್ಷೇತ್ರ ಗಮನಾರ್ಹ ಬೆಳವಣಿಗೆ ಕಂಡಿದೆ. ಇಲ್ಲಿನ ಸ್ಥಳೀಯ ಪ್ರತಿಭೆಗಳಿಗೆ ತುಳು ಚಲನಚಿತ್ರ ವೇದಿಕೆ ನೀಡುತ್ತಿದೆ ಎಂದು ನಟ, ನಿರ್ದೇಶಕ ರಿಶಬ್ ಶೆಟ್ಟಿ ಹೇಳಿದರು. ಆಳ್ವಾಸ್ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ ಮಾತನಾಡಿ, ೪೭ ವರ್ಷಗಳಲ್ಲಿ ಸುಮಾರು ೮೦ಕ್ಕೂ ಹೆಚ್ಚಿನ ತುಳು ಚಲನಚಿತ್ರಗಳು ತೆರೆಕಂಡಿದೆ. ಅನೇಕ ಭಾಷೆಗಳು ಅವನತಿ ಕಾಣುತ್ತಿರುವ ಈ ಸಂದರ್ಭದಲ್ಲಿ ತುಳು ಭಾಷೆ ದಿನದಿಂದ ದಿನಕ್ಕೆ ಪ್ರಜ್ವಲಿಸುತ್ತಿದೆ ಎಂದು ವಿವರಿಸಿದರು.
ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್, ಐಡಿಯಲ್ ಐಸ್ಕ್ರೀಮ್ ವ್ಯವಸ್ಥಾಪಕ ನಿರ್ದೇಶಕ ಮುಕುಂದ್ ಕಾಮತ್, ರೆಡ್ ಎಫ್ಎಂ ಎಂಡಿ ಸುರೇಶ್ ಗಣೇಶನ್, ಉದ್ಯಮಿ ನಿಶಾನ್ ಶೇಟ್, ಮಾರ್ಟಿನ್ ಪೌಲ್, ಶೋಭಿತ್ ಶೆಟ್ಟಿ, ಚಂದ್ರಶೇಖರ್ ಮತ್ತಿತರರು ಉಪಸ್ಥಿತರಿದ್ದರು.
ಈ ವರ್ಷ ೧೩ ಸಿನಿಮಾ ತೆರೆ ಕಂಡಿದ್ದು, ಅದರಲ್ಲಿ ೧೦ ಸಿನಿಮಾಗಳಿಗೆ ೨೪ ವಿಭಾಗಗಳಲ್ಲಿ ಪ್ರಶಸ್ತಿ ನೀಡಲಾಯಿತು. ಉತ್ತಮ ಚಲನಚಿತ್ರ ಪ್ರಶಸ್ತಿ ಪಿಲಿಬೈಲ್ ಯಮುನಕ್ಕೆ ಚಿತ್ರದ ಪಾಲಾಯಿತು. ಉತ್ತಮ ನಟ ಪ್ರಶಸ್ತಿ ಪಿಲಿಬೈಲ್ ಯಮುನಕ್ಕೆ ಚಿತ್ರದ ನಟನೆಗೆ ಪೃಥ್ವಿ ಅಂಬರ್ ಪಡೆದರೆ, ಪವಿತ್ರ ಚಲನಚಿತ್ರದ ನಟನೆಗೆ ಚಿರಶ್ರೀ ಅಂಚನ್ ಉತ್ತಮ ನಟಿ ಪ್ರಶಸ್ತಿ ಪಡೆದರು. ಜೂರಿ ಸ್ಪೆಷಲ್ ಅವಾರ್ಡ್ ನವೀನ್ ಡಿ.ಪಡೀಲ್ ಮತ್ತು ಜೀವಮಾನ ಸಾಧನೆ ಪ್ರಶಸ್ತಿಯನ್ನು ಎಂ.ಕೆ.ಸೀತಾರಾಮ ಕುಲಾಲ್ ಸ್ವೀಕರಿಸಿದರು.
ಉಳಿದಂತೆ ಉತ್ತಮ ಸಹ ನಟಿ-ವಿನಯ ಪ್ರಸಾದ್, ಉತ್ತಮ ಸಹ ನಟ- ಸುರೇಶ್ ರೈ, ಉತ್ತಮ ಬಾಲನಟಿ- ಪೂರ್ವಿ, ಉತ್ತಮ ನಿರ್ದೇಶಕ- ಸೂರಜ್ ಕೆ.ಶೆಟ್ಟಿ, ಉತ್ತಮ ಕಥೆ- ಅನಂತರಾಮ್ ಎರ್ಮಾಳ್, ಉತ್ತಮ ಚಿತ್ರಕತೆ-ಸೂರ್ಯ ಮೆನನ್, ಉತ್ತಮ ಸಂಭಾಷಣೆ- ಸುಂದರ ರೈ ಮಂದಾರ, ಉತ್ತಮ ಸಾಹಸ- ಕೌರವ ವೆಂಕಟೇಶ್, ಬೆಸ್ಟ್ ಬ್ಯಾಗ್ರೌಂಡ್ ಸ್ಕೋರ್- ಎಸ್.ಪಿ.ಚಂದ್ರಕಾಂತ್, ಉತ್ತಮ ಛಾಯಾಗ್ರಹಣ- ಸಂತೋಷ್ ರೈ ಪಾತಾಜೆ, ಉತ್ತಮ ಸಂಕಲನ- ಅಕ್ಷಯ್ ಮೆಹ್ತಾ, ಉತ್ತಮ ನೃತ್ಯಸಂಯೋಜನೆ-ಅಶೋಕ್ ರಾಜ್, ಉತ್ತಮ ಕಲಾನಿರ್ದೇಶನ- ಬಾಬು ಖಾನ್, ಉತ್ತಮ ಸಾಹಿತ್ಯ- ರಂಜಿತ್ ಸುವರ್ಣ, ಉತ್ತಮ ಸಂಗೀತ- ಕಿಶೋರ್ ಕುಮಾರ್ ಶೆಟ್ಟಿ, ಉತ್ತಮ ಗಾಯಕ- ಪಟ್ಲ ಸತೀಶ್ ಶೆಟ್ಟಿ, ಉತ್ತಮ ಗಾಯಕಿ- ಮೇಘನಾ ಕುಲಕರ್ಣಿ, ಉತ್ತಮ ಹಾಸ್ಯ ನಟ- ವಿಸ್ಮಯ ವಿನಾಯಕ್, ಉತ್ತಮ ಖಳನಟ ಪ್ರಶಸ್ತಿ-ಮನೋಜ್ ಪುತ್ತೂರು ಪಡೆದುಕೊಂಡರು. ವಿಜೆ ವಿನೀತ್ ಮತ್ತು ಸೌಜನ್ಯಾ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು.