ಮಂಗಳೂರು, ಮೇ 31 (DaijiworldNews/SM): ಕರ್ನಾಟಕ ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ದೇವಸ್ಥಾನಗಳು ಸೇರಿದಂತೆ ರಾಜ್ಯದಲ್ಲಿರುವ ಎಲ್ಲಾ ದೇವಸ್ಥಾನಗಳನ್ನು ತೆರೆದು ಭಕ್ತರಿಗೆ ಪೂಜೆ ಪುನಸ್ಕಾರ ಮತ್ತು ದರ್ಶನದ ಬಗ್ಗೆ ಅವಕಾಶ ಮಾಡಿಕೊಡುವ ವಿಚಾರಕ್ಕೆ ಸಂಬಂಧಿಸಿದಂತೆ ದಿನಾಂಕ ಮುಂದೂಡಲಾಗಿದೆ. ಜೂನ್ 8ಕ್ಕೆ ದೇವಸ್ಥಾನಗಳು ತೆರೆದುಕೊಂಡು ಭಕ್ತರಿಗೆ ಸೇವೆ ನೀಡಲಿವೆ.
ಈ ಹಿಂದೆ ಜೂನ್ 1ಕ್ಕೆ ದೇವಸ್ಥಾನಗಳನ್ನು ತೆರೆಯಬೇಕೆಂದು ರಾಜ್ಯದಲ್ಲಿ ನಿರ್ಧರಿಸಲಾಗಿತ್ತು. ಆದರೆ, ಕೇಂದ್ರ ಸರ್ಕಾರ ನೀಡಿರುವ ನೂತನ ಮಾರ್ಗಸೂಚಿಯ ಮೇರೆಗೆ ಜೂನ್ 8 ಕ್ಕೆ ಮುಂದೂಡಲಾಗಿದೆ. ದೇವರ ದರ್ಶನಕ್ಕಾಗಿ ಹಾತೊರೆಯುತ್ತಿರುವ ಭಕ್ತರು ಸಹಕಾರ ನೀಡುವಂತೆ ಸಚಿವ ಕೋಟ ಮನವಿ ಮಾಡಿಕೊಂಡಿದ್ದಾರೆ.
ಜೂನ್ ಎಂಟರಂದು ಮಾಸ್ಕ್ ಧರಿಸಿ ದೇವಸ್ಥಾನಗಳಿಗೆ ತೆರಳಬೇಕಾಗಿದೆ. ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳುವುದು ಅಗತ್ಯವಾಗಿದೆ. ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ದೇವಸ್ಥಾನಗಳನ್ನು ತೆರೆಯಲು ಸೂಚಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.
ಇಲಾಖಾ ಅಧಿಕಾರಿಗಳಿಗೆ ಮಾರ್ಗಸೂಚಿ ತಯಾರಿಸಲು ಸೂಚನೆ ನೀಡಲಾಗಿದೆ ಎಂದು ಹೇಳಿದ್ದಾರೆ. ಮಾನ್ಯ ಹಿಂದು ಧಾರ್ಮಿಕ ದತ್ತಿ ಪ್ರಶಸ್ತಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಹೇಳಿಕೆಯ ಮೇರೆಗೆ ಜೂನ್ 8ಕ್ಕೆ ದೇವಸ್ಥಾನ ತೆರೆಯುವುದು ನಿಶ್ಚಯವಾಗಿದೆ.