ಮಂಗಳೂರು, ಜೂ 01 (Daijiworld News/MSP) : ಜಾತಿ, ಧರ್ಮಗಳೆಂದು ನಮ್ಮ ನಡುವೆ ಅಡ್ಡಗೋಡೆ ಹಾಕುತ್ತಾ ಸಮಾಜದ ಮಧ್ಯೆ ಬಿರುಕು ಸೃಷ್ಠಿಸಿ ಯಾವತ್ತೂ ಗಲಭೆಗಳದ್ದೇ ವರದಿಗಳಾಗುತ್ತಿರುವಾಗ, ಮಾನವೀಯತೆ ಎಂಬುದು ಮರೀಚಿಕೆಯಾಗುತ್ತಿರುವಾಗ ಪಾಣೆಮಂಗಳೂರು ಗೂಡಿನ ಬಳಿಯ ಯುವಕರ ತಂಡವೊಂದು ಜೀವ ಕಳೆದುಕೊಳ್ಳುತ್ತಿರುವ ಮಾನವೀಯತೆಗೆ ಮರುಜೀವ ನೀಡಿ ಸಮಾಜಕ್ಕೆ ಮಾದರಿಯಾಗಿರುತ್ತಾರೆ.
ಮೇ 24ರಂದು ಮಧ್ಯಾಹ್ನ ನೇತ್ರಾವತಿ ನದಿ ಸೇತುವೆಗೆ ಬಂದ ಕಲ್ಲಡ್ಕ ಹನುಮಾನ್ ನಗರ ನಿವಾಸಿ ನಿಶಾಂತ್ , ಆತ್ಮಹತ್ಯೆ ಮಾಡಲು ನದಿಗೆ ಹಾರಿದ್ದನ್ನು ಕಂಡ ಸ್ಥಳೀಯ ಗೂಡಿನಬಳಿ ಸಮೀಪದ ಮುಹಮ್ಮದ್, ಸಮೀರ್, ಝಾಯಿದ್, ಆರಿಫ್, ಮುಕ್ತಾರ್ ಮತ್ತು ತೌಸೀಫ್ ರವರು ಕೂಡಲೇ ತಮ್ಮ ಜೀವದ ಹಂಗು ತೊರೆದು ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ದಡಕ್ಕೆ ತಂದು ಪ್ರಥಮ ಚಿಕಿತ್ಸಾ ವಿಧಾನಗಳನ್ನು ನೀಡುವುದರ ಮೂಲಕ ಪ್ರಾಣವನ್ನು ರಕ್ಷಿಸಲು ಪ್ರಯತ್ನಿಸಿದ್ದರು.
ಪ್ರಥಮ ಚಿಕಿತ್ಸೆಯಾಗಿ ಆರಿಫ್ ಎಂಬವರು ತನ್ನ ಬಾಯಿಯಿಂದ ನಿಶಾಂತನ ಬಾಯಿಗೆ ಕೃತಕ ಉಸಿರಾಟ ನೀಡಲು ಯತ್ನಿಸುತ್ತಿರುವುದು ವಿಡಿಯೋಗಳಲ್ಲಿ ವೈರಲ್ ಆಗಿದ್ದು, ಕೊನೆಯಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ ಆತನನ್ನು ಉಳಿಸಲಾಗಲಿಲ್ಲ. ಆರಿಫ್ ಎಂಬವರು ಕಳೆದ ಹತ್ತಾರು ವರ್ಷಗಳ ಕಾಲ ಖತ್ತರ್ ನಲ್ಲಿ ಉದ್ಯೋಗದಲ್ಲಿದ್ದಿದ್ದು ಅವರ ಈ ದೃಶ್ಯಗಳು ಕಣ್ತುಂಬುವಂತದ್ದಾಗಿದೆ.
ಕೋಮು ವ್ಯಸನದಿಂದ ತತ್ತರಿಸುತ್ತಿರುವ ದಕ್ಷಿಣ ಕನ್ನಡದಲ್ಲಿ ತಮ್ಮ ಧೀರ ನಡೆಗಳ ಮೂಲಕ ಪ್ರೀತಿ, ಭ್ರಾತೃತ್ವದ ನಿಜವಾದ ಅರ್ಥವನ್ನು ಸಮಾಜಕ್ಕೆ ಕಲಿಸಿ ಕೊಟ್ಟಿರುವ ಈ ತಂಡಕ್ಕೆ ಕರ್ನಾಟಕ ಕಲ್ಚರಲ್ ಫೌಂಡೇಷನ್ ಖತ್ತರ್ ರಾಷ್ಟ್ರೀಯ ಸಮಿತಿಯು ಅಭಿನಂದನೆಗಳನ್ನು ಸಲ್ಲಿಸುತ್ತಿದೆ. ಈದುಲ್ ಫಿತ್ರ್ ಹಬ್ಬದಂದೇ ನಡೆದ ಈ ಘಟನೆಯ ಮೂಲಕ ಇಸ್ಲಾಮಿನ ಮೂಲ ಆದರ್ಶಗಳಾದ ಶಾಂತಿ, ಸೌಹಾರ್ದತೆ ಮತ್ತು ತ್ಯಾಗದ ಸಂದೇಶವನ್ನು ಸಮಾಜದ ನಡುವೆ ಪ್ರಾಯೋಗಿಗವಾಗಿ ತೋರಿಸಿ ಕೊಟ್ಟಿರುವುದು ಇಡೀ ನಾಡಿಗೆ ಹೆಮ್ಮೆಯಾಗಿದೆ ಎಂದು ಕೆಸಿಎಫ್ ಖತ್ತರ್ ಪ್ರತಿನಿಧಿಗಳು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.