ಮಂಗಳೂರು, ಜೂ 01 (Daijiworld News/MSP): ಉದ್ಯೋಗ ಕಳೆದುಕೊಳ್ಳುವ ಭೀತಿಯಲ್ಲಿ ನೂರಕ್ಕೂ ಹೆಚ್ಚು ಗೃಹ ರಕ್ಷಕರು ನಗರದ ಮೇರಿ ಹಿಲ್ ಬಳಿ ಇರುವ ಹೋಮ್ ಗಾರ್ಡ್ ಕಚೇರಿ, ಎದುರು ಜಮಾಯಿಸಿ ಲಾಕ್ಡೌನ್ ಕಾರಣ ರಾಜ್ಯ ಸರ್ಕಾರ ಗೃಹರಕ್ಷಕರ ಸಂಖ್ಯೆಯನ್ನು ಕಡಿತಗೊಳಿಸುವ ಆದೇಶ ಹಾಗೂ ಸಂಬಳ ಕಡಿತದ ಭೀತಿ ವಿರುದ್ಧ ಪ್ರತಿಭಟನೆ ನಡೆಸಿದರು.
ರಾಜ್ಯದ 25 ಸಾವಿರಕ್ಕೂ ಅಧಿಕ ಗೃಹ ರಕ್ಷಕ ಸಿಬ್ಬಂದಿಯ ಪೈಕಿ 12 ಸಾವಿರಕ್ಕೂ ಅಧಿಕ ಸಿಬ್ಬಂದಿಯನ್ನು ಕೈ ಬಿಡುವಂತೆ ಅಧಿಕೃತವಾಗಿ ಸೂಚನೆ ನೀಡಿದ್ದು ಈ ಆದೇಶದ ಪ್ರಕಾರ ಸಾವಿರಾರು ಹೋಮ್ ಗಾರ್ಡ್ಗಳು ತಮ್ಮ ಉದ್ಯೋಗವನ್ನು ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ. ಮಂಗಳೂರಿನಲ್ಲಿ 250 ಗೃಹರಕ್ಷಕರು ಪೊಲೀಸ್ ವರಿಷ್ಠಾಧಿಕಾರಿ ಮತ್ತು 153 ಪೊಲೀಸ್ ಆಯುಕ್ತರ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರದ ಆದೇಶದ ಪ್ರಕಾರ ಎಸ್ಪಿ ಅಡಿಯಲ್ಲಿ ಬರುವ 170 ಹೋಂ ಗಾರ್ಡ್ಗಳು ಮತ್ತು ಪೊಲೀಸ್ ಕಮಿಷನರ್ ಅಡಿಯಲ್ಲಿ ಬರುವ 53 ಹೋಮ್ ಗಾರ್ಡ್ಗಳು ಕೆಲಸವನ್ನು ಕಳೆದುಕೊಳ್ಳಲ್ಲಿದ್ದಾರೆ
ಇದೇ ವೇಳೆ ಜಿಲ್ಲಾ ಗೃಹರಕ್ಷಕ ದಳದ ಕಮಾಂಡೆಂಟ್ ಮುರಳಿ ಮೋಹನ್ ಚೂಂತಾರು ಅವರು , ಈ ಬಗ್ಗೆ ಉನ್ನತ ಅಧಿಕಾರಿಗಳ ಬಳಿ ಮಾತನಾಡುವುದಾಗಿ ತಿಳಿಸಿ ಪ್ರತಿಭಟನೆ ನಡೆಸುತ್ತಿದ್ದ ಗೃಹರಕ್ಷಕ ಸಿಬ್ಬಂದಿಗಳ ಮನವೊಲಿಸಲು ಪ್ರಯತ್ನಿಸಿದರು.
"ಮಳೆಗಾಲ, ಪ್ರಾಕೃತಿಕ ವಿಕೋಪ, ಸಾರಿಗೆ ಸುವ್ಯವಸ್ಥೆ, ಗಣ್ಯರ ಭೇಟಿಯಂತಹ ಸಮಯದಲ್ಲಿ ಹೋಮ್ ಗಾರ್ಡ್ಗಳ ಸೇವೆ ತುಂಬಾ ಅಗತ್ಯವಾಗಿರುತ್ತದೆ. ಗೃಹ ರಕ್ಷಕರು ಕೆಲಸ ಕಳೆದುಕೊಂಡರೆ ಪೊಲೀಸ್ ಇಲಾಖೆಯ ಮೇಲೂ ಕೆಲಸ ಕಾರ್ಯಗಳಲ್ಲಿ ಭಾರೀ ಒತ್ತಡ ಬೀಳಲಿದೆ. ಆದ್ದರಿಂದ ಪೊಲೀಸ್ ಆಯುಕ್ತರು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು ಈ ವಿಷಯದ ಬಗ್ಗೆ ಚರ್ಚಿಸಬೇಕು ಮತ್ತು ಅವರನ್ನು ಉದ್ಯೋಗದಲ್ಲಿ ಉಳಿಸಿಕೊಳ್ಳಲು ಸರ್ಕಾರಕ್ಕೆ ವಿನಂತಿಸಬೇಕು ”ಎಂದು ಹೆಸರು ಹೇಳಲಿಚ್ಚಿಸದ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.