ಮಂಗಳೂರು, ಜೂ 01 (DaijiworldNews/PY) : ಮನೆ ಮನೆಗೆ ಕೊರೊನಾ ಮುಟ್ಟಿಸುವ ಯೋಜನೆ ಇದೆ ಎಂದು ಯು.ಟಿ ಖಾದರ್ ಆರೋಪ ಮಾಡಿದ್ದಾರೆ.
ಇಂದು ಮಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೊರ ರಾಜ್ಯದಿಂದ ಹಾಗೂ ಹೊರ ರಾಷ್ಟ್ರದಿಂದ ಬಂದವರಿಗೆ ಈ ಹಿಂದೆ ಸೂಕ್ತವಾದ ವ್ಯವಸ್ಥೆ ಇತ್ತು. ಆದರೆ ಈಗ ಹೊರ ರಾಜ್ಯದಿಂದ ಹಾಗೂ ಹೊರ ರಾಷ್ಟ್ರದಿಂದ ಬಂದವರಿಗೆ ಕ್ವಾರಂಟೈನ್ ಅವಧಿಯನ್ನು ಖಡಿತ ಮಾಡಲಾಗಿದೆ. ಅಲ್ಲದೇ ಅವರ ಪರೀಕ್ಷಾ ವರದಿ ಬರಲಿ ಅಥವಾ ಬಾರದೇ ಇರಲಿ ಅವರನ್ನು ಮನೆಗೆ ಕಳುಹಿಸುತ್ತಿದ್ದಾರೆ. ಸರ್ಕಾರ ಯಾಕೆ ಇಂತಹ ಕ್ರಮಗಳನ್ನು ಕೈಗೊಂಡಿದೆ ಎನ್ನುವುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಾರ್ಗಸೂಚಿ ಇರಬಹುದು. ಇದರಲ್ಲಿ ಜಿಲ್ಲಾಧಿಕಾರಿಗೆ ಹಾಗೂ ಉಸ್ತುವಾರಿ ಸಚಿವರಿಗೆ ಅಧಿಕಾರ ಇದೆ. ತಕ್ಷಣವೇ ಈ ವಿಚಾರವಾಗಿ ಜಿಲ್ಲಾ ಉಸ್ತುವಾರಿ ಸಚಿವರು ಆರೋಗ್ಯ ಇಲಾಖೆಯೊಂದಿಗೆ ಸಭೆ ನಡೆಸಿ. ಹೊರ ರಾಷ್ಟ್ರದಿಂದ ಹಾಗೂ ಹೊರ ರಾಜ್ಯದಿಂದ ಬಂದವರನ್ನು ಕಡ್ಡಾಯವಾಗಿ ತಪಾಸಣೆ ಮಾಡಿ ಎಂದು ತಿಳಿಸಿದರು.
ಪ್ರತೀ ಜಿಲ್ಲೆಗೆ ಅದರದ್ದೇ ಆದಂತಹ ವಿಚಾರ ಇದೆ. ನಾವು ನಮ್ಮ ಜಿಲ್ಲೆಯ ಬಗ್ಗೆ ಆಲೋಚನೆ ಮಾಡಬೇಕು. ಮೊದಲು ಲಾಕ್ಡೌನ್ ಜಾರಿಯಾದ ವೇಳೆಯಲ್ಲಿ ಸಚಿವರು, ಶಾಸಕರು ದಿನಕ್ಕೆ ಮೂರು ಬಾರಿ ಸಭೆ ನಡೆಸುತ್ತಿದ್ದರು. ಆದರೆ ಈಗ ಯಾಕೆ ಈ ಬಗ್ಗೆ ಸಭೆ ಮಾಡುತ್ತಿಲ್ಲ ಎಂದರು.
ಮುಂದೆ ಮಹಾರಾಷ್ಟ್ರದ ರೀತಿ ಜಿಲ್ಲೆಯಲ್ಲಿ ಆದರೆ ಅದನ್ನು ನಿಯಂತ್ರಣ ಮಾಡಲು ಯಾವ ರೀತಿಯಾದ ಯೋಜನೆ ಇದೆ. ಈ ಸಂದರ್ಭ ನಮ್ಮ ಜಿಲ್ಲೆಯನ್ನು ಯಾವುದೇ ರಾಜ್ಯಕ್ಕೆ, ದೇಶಕ್ಕೆ ಹೋಲಿಕೆ ಮಾಡಬೇಡಿ ಬದಲಾಗಿ ನಾವು ಸರಿಯಾಗಿದ್ದೇವಾ ನೋಡಿ ಎಂದು ಹೇಳಿದರು.