ಕರಾವಳಿ, ಜೂ 01(DaijiworldNews/SM): ಉಡುಪಿ ಜಿಲ್ಲೆಯಲ್ಲಿ ಜೂನ್ ಒಂದರ ಸೋಮವಾರ ಒಂದೇ ದಿನ ಕೊರೊನಾ ಪ್ರಕರಣಗಳು ಅತ್ಯಧಿಕ ಸಂಖ್ಯೆಯಲ್ಲಿ ಪತ್ತೆಯಾಗಿದೆ. ಸೋಮವಾರದಂದು ಉಡುಪಿಯಲ್ಲಿ ಪತ್ತೆಯಾದ ಪ್ರಕರಣಗಳ ಪೈಕಿ 37 ಪ್ರಕರಣಗಳ ಮೂಲ ಆರೋಗ್ಯ ಇಲಾಖೆಗೆ ಪತ್ತೆಯಾಗಿರಲಿಲ್ಲ. ಆದರೆ, ಇವುಗಳಲ್ಲಿ ಬಹುತೇಕ ಮೂಲ ಪತ್ತೆಹಚ್ಚುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.
ರಾಜ್ಯ ಆರೋಗ್ಯ ಇಲಾಖೆ ನೀಡಿರುವ ವರದಿಯಲ್ಲಿ ಉಡುಪಿ ಜಿಲ್ಲೆಯ 73 ಸೋಂಕಿತರ ಪೈಕಿ 37 ಮಂದಿಯ ಮೂಲ ಪತ್ತೆಯಾಗಿಲ್ಲ ಎಂದು ಉಲ್ಲೇಖಿಸಿತ್ತು. ಆದರೆ, ಈ ಕುರಿತಂತೆ ಕ್ಷಿಪ್ರ ಗತಿಯಲ್ಲಿ ಜಿಲ್ಲಾಡಳಿತ ಮೂಲ ಪತ್ತೆ ಹಚ್ಚುವ ಕಾರ್ಯ ನಡೆಸಿದೆ. 61 ಮಂದಿ ಮಹಾರಾಷ್ಟ್ರದಿಂದ ಬಂದವರೆಂದು ಉಡುಪಿ ಜಿಲ್ಲಾಧಿಕಾರಿ ಜಗದೀಶ್ ಸ್ಪಷ್ಪಡಿಸಿದೆ.
ನಾಲ್ವರು ಪೊಲೀಸ್ ಸಿಬ್ಬಂದಿಗಳಿಗೂ ಸೋಂಕು:
ಇನ್ನು ಉಡುಪಿ ಜಿಲ್ಲೆಯಲ್ಲಿ ಪತ್ತೆಯಾಗಿರುವ ಸೋಂಕಿತ ಪೈಕಿ ನಾಲ್ವರು ಪೊಲೀಸ್ ಸಿಬ್ಬಂದಿಗಳಾಗಿದ್ದಾರೆ. ಅವರನ್ನು ಸಂಪರ್ಕಿಸಿದ ಉಡುಪಿಯ ಟಿಎಂ ಎ ಪೈ ಕೋವಿಡ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಐವರ ಮೂಲ ಪತ್ತೆಯಷ್ಟೇ ಬಾಕಿ:
ಇನ್ನು ಉಡುಪಿ ಜಿಲ್ಲೆಯಲ್ಲಿ ಐವರ ಮೂಲ ಪತ್ತೆ ಹಚ್ಚುವ ಕಾರ್ಯ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಸ್ಪಷ್ಟಪಡಿಸಿದ್ದಾರೆ. ಈ ಪೈಕಿ ಕೆಲವರ ಮೊಬೈಲ್ ಸಂಖ್ಯೆ ಸ್ವಿಟ್ಚ್ ಆಫ್ ಆಗಿದೆ. ಈ ಕಾರಣದಿಂದ ಅವರನ್ನು ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ. ಅವರನ್ನು ತಕ್ಷಣ ಪತ್ತೆ ಹಚ್ಚಿ ಆಸ್ಪತ್ರೆಗೆ ರವಾನಿಸಲಾಗುವುದೆಂದು ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.