ಮಂಗಳೂರು, ಜೂ 01 (DaijiworldNews/SM): ರಾಜ್ಯದಲ್ಲಿ ವಿದೇಶ ಹಾಗೂ ಹೊರ ರಾಜ್ಯಗಳಿಂದ ಆಗಮಿಸುವವರಿಗೆ ಸರಕಾರ 14 ದಿನಗಳ ಕಡ್ಡಾಯ ಸಾಂಸ್ಥಿಕ ಕ್ವಾರಂಟೈನ್ ನಿಯಮವನ್ನು ಜಾರಿಗೆ ತಂದಿತ್ತು. ಆದರೆ, ಇದೀಗ ಅದನ್ನು ಪರಿಷ್ಕರಿಸಲಾಗಿದ್ದು, 14 ದಿನದ ಬದಲಾಗಿ 7 ದಿನಗಳಿಗೆ ಕಡಿತಗೊಳಿಸಲಾಗಿದೆ. ಇದರಿಂದಾಗಿ ರಾಜ್ಯದಲ್ಲಿ ಕೊರೊನಾತಂಕ ಶುರುವಾಗಿದೆ.
ಹೊರರಾಜ್ಯದಿಂದ ಬಂದವರನ್ನು ಸಾಂಸ್ಥಿಕ ಕ್ವಾರಂಟೈನ್ ಗೆ ಒಳಪಡಿಸಲಾಗುತ್ತಿದೆ. ತಕ್ಷಣವೇ ಅವರ ಕೊರೊನಾ ಪರೀಕ್ಷೆಗಾಗಿ ಗಂಟಲ ದ್ರವ ಮಾದರಿ ಸಂಗ್ರಹಿಸಲಾಗುತ್ತದೆ. ಆದರೆ, ಮಾದರಿ ಪರೀಕ್ಷೆಗೆ ಕಳುಹಿಸಿದ ತಕ್ಷಣಕ್ಕೆ ವರದಿ ಲಭ್ಯವಾಗುವುದಿಲ್ಲ. ವರದಿಗಾಗಿ ಮೂರು ನಾಲ್ಕು ದಿನಗಳು ಕಾದಿರುವ ಪ್ರಮೇಯಗಳು ಕೂಡ ಇವೆ. ಇಂತಹ ಸಂದರ್ಭಗಳಲ್ಲಿ ಕೆಲವರ ಕ್ವಾರಂಟೈನ್ ಅವಧಿ ಮುಗಿದು ಅವರನ್ನು ಮನೆಗೆ ಕಳುಹಿಸಲಾಗುತ್ತದೆ. ಅದರ ಬಳಿಕ ಅವರ ವರದಿ ಕೈ ಸೇರುತ್ತದೆ. ಬಹುತೇಕ ಪ್ರಕರಣಗಳಲ್ಲಿ ನೆಗೆಟಿವ್ ಬಂದಿದೆ. ಆದರೆ, ಇದೀಗ ಕೆಲವು ಪ್ರಕರಣಗಳು ಪಾಸಿಟಿವ್ ಬರುತ್ತಿದ್ದು, ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಕಾರ್ಕಳ, ಬೋಳಿಯಾರು, ಮುಳಿಹಿತ್ಲು ಘಟನೆಗಳಿಂದ ಆತಂಕ:
ಇನ್ನು ಈಗಾಗಲೇ 7 ದಿನಗಳ ಕ್ವಾರಂಟೈನ್ ನಿಯಮ ಜಾರಿಯಲ್ಲಿದೆ. ಅದರಂತೆ ಕೆಲವರು ಕ್ವಾರಂಟೈನ್ ಕೇಂದ್ರದಿಂದ ಮನೆಗೆ ತೆರಳಿದ್ದಾರೆ. ಮನೆಗೆ ತೆರಳಿದ ಬಳಿಕ ಹೋಂಕ್ವಾರಂಟೈನ್ ನಿಯಮವಿದ್ದರೂ, ಕೆಲವು ವ್ಯಕ್ತಿಗಳು ಮನೆಯಿಂದ ಹೊರಗಡೆಬಂದು ತಿರುಗಾಡುತ್ತಿದ್ದಾರೆ. ಇದರಿಂದಾಗಿ ಸಾರ್ವಜನಿಕರಲ್ಲಿ ಆತಂಕ ಉಂಟಾಗಿದೆ. ಇದಕ್ಕೆ ಪುಷ್ಟಿ ಎಂಬಂತೆ ಇದೀಗ ಕ್ವಾರಂಟೈನ್ ಮುಗಿಸಿದ ಬಳಿಕ ವರದಿ ಬರದೆ ಮನೆಗೆ ತೆರಳಿದವರಲ್ಲಿ ಕಾರ್ಕಳ, ಬೋಳಿಯಾರು ಹಾಗೂ ಮುಳಿಹಿತ್ಲು ನಿವಾಸಿಗಳಲ್ಲಿ ಪಾಸಿಟಿವ್ ಕಂಡುಬಂದಿದೆ. ಇದರಿಂದ ಪರಿಸರದ ಜನತೆ ಚಿಂತಿತರಾಗಿದ್ದಾರೆ. ವರದಿ ಕೈ ಸೇರದೆ ಕ್ವಾರಂಟೈನ್ ನಿಂದ ಕಳುಹಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ಇದೀಗ ಕಾಡಲಾರಂಭಿಸಿದೆ.
ಸಾರ್ವಜನಿಕ ವಲಯದಲ್ಲಿ ವಿರೋಧ:
ಸರಕಾರ ಆಯಾ ಸಂದರ್ಭಕ್ಕನುಗುಣವಾಗಿ ನಿಯಮಾವಳಿಗಳನ್ನು, ಮಾರ್ಗಸೂಚಿಗಳನ್ನು ಬದಲಾಯಿಸುತ್ತಿದೆ. ಆದರೆ, ಕೆಲವೊಂದು ಸಾರ್ವಜನಿಕರಿಗೆ ಮಾರಕವಾಗಿ ಪರಿಣಮಿಸುತ್ತವೆ. ಇದೀಗ ಕ್ವಾರಂಟೈನ್ ಅವಧಿ ಕಡಿತಗೊಳಿಸಿ ವರದಿ ಕೈ ಸೇರುವ ಮುನ್ನವೇ ಕ್ವಾರಂಟೈನ್ ನಲ್ಲಿದ್ದವರನ್ನು ಮನೆಗೆ ಕಳುಹಿಸುವುದಕ್ಕೆ ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧಗಳು ಕೇಳಿಬರುತ್ತಿವೆ. ಸರಕಾರ ತಕ್ಷಣಕ್ಕೆ ತನ್ನ ನಿರ್ಧಾರವನ್ನು ಬದಲಾಯಿಸಬೇಕೆಂಬ ಒತ್ತಾಯ ಕೇಳಿಬರುತ್ತಿದೆ. ಜನರ ಜೀವದೊಂದಿಗೆ ಚೆಲ್ಲಾಟವಾಡದೆ, ಸೂಕ್ತ ನಿರ್ಧಾರ ಕೈಗೊಳ್ಳಬೇಕಾಗಿದೆ.
ಮಾಜಿ ಸಚಿವ ಖಾದರ್ ವಿರೋಧ:
ಇನ್ನು ವರದಿ ಕೈ ಸೇರುವ ಮುನ್ನವೇ ಕ್ವಾರಂಟೈನ್ ನಲ್ಲಿದ್ದವರನ್ನು ಮನೆಗೆ ಕಳುಹಿಸುವುದಕ್ಕೆ ಮಾಜಿ ಸಚಿವ ಯು.ಟಿ. ಖಾದರ್ ವಿರೋಧ ವ್ಯಕ್ತಪಡಿಸಿದ್ದು, ಸರಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ್ದಾರೆ. `ಸರಕಾರ ಮನೆ ಮನೆಗೆ ಕೊರೊನಾ ಹಂಚಲು ಹೊರಟಿದೆ' ಎಂದು ಅವರು ಆಕ್ರೋಶ ಹೊರಹಾಕಿದ್ದು, ತಕ್ಷಣ ತನ್ನ ನಿರ್ಧಾರವನ್ನು ಪರಿಷ್ಕರಿಸಬೇಕೆಂದು ಆಗ್ರಹಿಸಿದ್ದಾರೆ.