ಬೆಳ್ತಂಗಡಿ, ಜೂ 01 (DaijiworldNews/SM): ಮಳೆಗಾಲ ಪ್ರಾರಂಭವಾಗುವ ಮೊದಲೇ ನೇತ್ರಾವತಿ ನದಿಯಲ್ಲಿ ಪ್ರವಾಹದಂತಹ ಪರಿಸ್ಥಿತಿ ತಾಲೂಕಿನ ಕೆಲವೆಡೆ ತಲೆದೋರಿದೆ.
ಮಲವಂತಿಗೆ, ಕೊಲ್ಲಿ, ಕುಕ್ಕಾವು, ಮಿತ್ತಬಾಗಿಲು, ಕಡಿರುದ್ಯಾವರ, ಮುಂಡಾಜೆ, ಕಲ್ಮಂಜ ಗ್ರಾಮಗಳ ಮೂಲಕ ಹರಿದುಹೋಗುವ ನೇತ್ರಾವತಿ ನದಿಯಲ್ಲಿ ಆದಿತ್ಯವಾರ ಮುಸ್ಸಂಜೆ ವೇಳೆಗೆ ಗುಡ್ಡ ಪ್ರದೇಶದಲ್ಲಿ ಬಿದ್ದ ಭಾರೀ ಮಳೆಗೆ ಬೋರ್ಗರೆದು ನೀರು ಹರಿದಿದೆ. ಇದರಿಂದಾಗಿ ಗ್ರಾಮಸ್ಥರಿಗೆ ಕಳೆದ ವರ್ಷ ಆಗಸ್ಟ್ 9 ರಂದು ಬಂದ ಪ್ರವಾಹದ ಕಹಿ ಅನುಭವಗಳನ್ನು ಮತ್ತೊಮ್ಮೆ ನೆನಪಿಸಿದೆ. ಮೇ ತಿಂಗಳಲ್ಲಿ ಈ ರೀತಿಯ ನೀರು ಬಂದಿರುವುದು ಅಚ್ಚರಿಯನ್ನುಂಟು ಮಾಡಿದೆ.
ಏಕಾಏಕಿ ನೀರು ಬಂದ ಪರಿಣಾಮ ಕೆಲವು ಕಡೆಗಳಲ್ಲಿ ನದಿ ದಡದಲ್ಲಿದ್ದ ನೀರಾವರಿ ಪಂಪ್ ಸೆಟ್ ಗಳಿಗೆ ಹಾನಿಯಾಗಿದೆ. ಪ್ರವಾಹದಲ್ಲಿ ಬಂದ ಕಸ-ಕಡ್ಡಿ, ಮರದ ತುಂಡುಗಳಿಂದಾಗಿ ಕುಕ್ಕಾವು-ಇಂದಬೆಟ್ಟು ಎಂಬಲ್ಲಿನ ಕೊಪ್ಪದಗಂಡಿ ಸೇತುವೆ ಮೂಲಕ ಸಂಪರ್ಕಕ್ಕೆ ಅಡ್ಡಿಯಾಗಿದೆ. ಇನ್ನು ಸೋಮವಾರ ಬೆಳಗ್ಗೆಯಿಂದಲೇ ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿದೆ.