ಬೆಳ್ತಂಗಡಿ, ಜೂ 02 (Daijiworld News/MSP): ತಾಲೂಕಿನ ಪ್ರಸಿದ್ದ ಸಂತೆಯಾದ ಬೆಳ್ತಂಗಡಿ ಸೋಮವಾರದ ಸಂತೆಯನ್ನು ಶಾಶ್ವತವಾಗಿ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆಯ ಆವರಣದಲ್ಲಿಯೇ ನಡೆಸುವ ತೀರ್ಮಾನಕ್ಕೆ ಬರಲಾಗಿದೆ.

ಶಾಸಕ ಹರೀಶ ಪೂಂಜಾ ಅವರು ಈ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ. ಎ.ಪಿ.ಎಂ.ಸಿ. ಯಾರ್ಡ್ನಲ್ಲಿ ಇನ್ನು ಮುಂದೆ ವಾರದ ಸಂತೆ ಖಾಯಂ ಆಗಿ ನಡೆಯಲಿದೆ. ಶಾಸಕರು ಎ.ಪಿ.ಎಂ.ಸಿ. ಸಭಾಂಗಣದಲ್ಲಿ ಸಭೆಯನ್ನು ನಡೆಸಿ ಮಹತ್ವದ ತೀರ್ಮಾನ ಕೈಗೊಂಡು ವಾರದ ಸಂತೆಯನ್ನು ಎಪಿಎಂಸಿಗೆ ಶಿಫ್ಟ್ ಮಾಡುವ ಮೂಲಕ ಬೆಳ್ತಂಗಡಿ ಜನತೆಯ ಬಹುವರುಷದ ಕನಸನ್ನು ನನಸು ಗೊಳಿಸಿದ್ದಾರೆ.
ಈ ಮೊದಲು ವಾರದ ಸಂತೆಯು ಸಂತೆಕಟ್ಟೆ ಪರಿಸರದಲ್ಲಿ ನಡೆಯುತ್ತಿತ್ತು. ಅಲ್ಲಿ ಜಾಗದ ಕೊರತೆ, ವ್ಯಾಪಾರಿಗಳಿಗೆ, ಜನರಿಗೆ ಹಾಗೂ ವಾಹನ ನಿಲುಗಡೆಗೆ ತೊಂದರೆ ಆಗುತ್ತಿತ್ತು. ಆದ್ದರಿಂದ ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ವೈಯಕ್ತಿಕ ಅಂತರ ಕಾಪಾಡುವ ಉದ್ದೇಶದಿಂದ ಪ್ರತಿ ಸೋಮವಾರ ನಡೆಯುವ ಬೆಳ್ತಂಗಡಿಯ ವಾರದ ಸಂತೆಯನ್ನು ಶಾಸಕರ ಸೂಚನೆಯಂತೆ ಬೆಳ್ತಂಗಡಿ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿರುವ ಹಳೆಕೋಟೆಯ ಎಪಿಎಂಸಿ ಯಾರ್ಡ್ಗೆ ತಾತ್ಕಾಲಿಕವಾಗಿ ಸ್ಥಳಾಂತರಿಸಲಾಗಿತ್ತು.ಇದೀಗ ಶಾಸಕರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಬೆಳ್ತಂಗಡಿಯ ವಾರದ ಸಂತೆಯನ್ನು ಖಾಯಂ ಆಗಿ ಎಪಿಎಂಸಿ ಯಾರ್ಡಿನಲ್ಲಿಯೇ ನಡೆಸಲು ತೀರ್ಮಾನಿಸಲಾಯಿತು. ಅದೇ ರೀತಿ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಪಾಲಿಸಬೇಕಾಗಿರುವುದರಿಂದ ಕೃಷಿಕರು, ವ್ಯಾಪಾರಸ್ಥರು ಹಾಗೂ ಗ್ರಾಹಕರ ನಡುವೆ ಸಾಮಾಜಿಕ ಅಂತರ ಕಾಪಾಡಲು ಅವಕಾಶವಾಗಲಿ ಎಂಬ ಉದ್ದೇಶದಿಂದ ಸಾಕಷ್ಟು ಸ್ಥಳಾವಕಾಶವಿರುವ ಎಪಿಎಂಸಿ ಯಾರ್ಡಿನಲ್ಲಿಯೇ ಸಂತೆ ನಡೆಸಲು ತೀರ್ಮಾನಿಸಲಾಯಿತು.
ಶಾಸಕರ ಹಾಗೂ ಆಡಳಿತ ಮಂಡಳಿಯ ನಿರ್ಧಾರ ಒಳ್ಳೆಯ ಬೆಳವಣಿಗೆ. ಈ ಕೆಲಸ ಯಾವತ್ತೋ ಆಗಬೇಕಾಗಿತ್ತು. ಹಲವಾರು ರಾಜಕೀಯ ಕಾರಣಗಳಿಂದ ಹಾಗೂ ಭ್ರಷ್ಟ ವ್ಯವಸ್ಥೆಯಿಂದ ಆಗಿರಲಿಲ್ಲ. ಈಗ ಆಗಿರುವುದರಿಂದ ಎಲ್ಲಾ ವ್ಯಾಪಾರಸ್ಥರಿಗೆ, ರೈತರಿಗೆ ಹಾಗೂ ಇತರರಿಗೆ ಅನುಕೂಲವಾಗಲಿದೆ. ಶಾಸಕರ ಈ ಕಾರ್ಯ ಶ್ಲಾಘನೀಯ ಎಂದು ಕೃಷಿಕರು, ವ್ಯಾಪಾರಿಗಳು ಅಭಿಪ್ರಾಯ ಪಟ್ಟಿದ್ದಾರೆ.
ಸಭೆಯಲ್ಲಿ ಎ.ಪಿ.ಎಂ.ಸಿ. ಅಧ್ಯಕ್ಷ ಕೇಶವ ಪಿ. ಬೆಳಾಲು, ಉಪಾಧ್ಯಕ್ಷ ಅಬ್ದುಲ್ ಗಫೂರ್, ತಹಶೀಲ್ದಾರ್ ಗಣಪತಿ ಶಾಸ್ತ್ರಿ, ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಸುಧಾಕರ್, ಎಂಜಿನಿಯರ್ ಮಹಾವೀರ ಆರಿಗ ಮತ್ತಿತರರು ಭಾಗವಹಿಸಿದ್ದರು.