ಉಡುಪಿ, ಜೂ 02 (DaijiworldNews/SM): ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಅಟ್ಟಹಾಸವನ್ನು ಮುಂದುವರೆಸುತ್ತಿದೆ. ಮುಂಬೈನಿಂದ ಮರಳಿದ ಬಹುತೇಕರಲ್ಲಿ ಇದೀಗ ಕೊರೊನಾ ಪಾಸಿಟಿವ್ ಕಂಡುಬರುತ್ತಿದ್ದು, ಮಂಗಳವಾರ ಒಂದೇ ದಿನ 150 ಮಂದಿಯಲ್ಲಿ ಕೊರೊನಾ ಸೋಂಕು ಇರುವುದು ಖಾತ್ರಿಯಾಗಿದೆ. ಈ ನಡುವೆ ಮತ್ತೊಂದು ನಿರಾಳವಾಗುವ ಸುದ್ದಿ ಲಭಿಸಿದ್ದು, 627 ಮಂದಿಯ ವರದಿ ನೆಗೆಟಿವ್ ಆಗಿದೆ.
ಒಂದು ಮೂಲಗಳ ಪ್ರಕಾರ ಮಂಗಳವಾರ ಉಡುಪಿಯಲ್ಲಿ ಇನ್ನೂರಕ್ಕೂ ಅಧಿಕ ಪಾಸಿಟಿವ್ ಪ್ರಕರಣಗಳಿವೆ ಎನ್ನುವ ಸುದ್ದಿ ವೈರಲ್ ಆಗಿತ್ತು. ಈ ಬಗ್ಗೆ ಕಂದಾಯ ಸಚಿವ ಆರ್. ಅಶೋಕ್ ಅವರೂ ಕೂಡ ಪ್ರತಿಕ್ರಿಯೆ ನೀಡಿದ್ದರು. ಆದರೆ, ಇದೀಗ ಉಡುಪಿ ಜಿಲ್ಲಾಡಳಿತ ಆರೋಗ್ಯ ಇಲಾಖೆಯಿಂದ ಸ್ಪಷ್ಟವಾದ ಮಾಹಿತಿ ಲಭ್ಯವಾಗಿದೆ. ಉಡುಪಿ ಜಿಲ್ಲೆಯಲ್ಲಿ 150 ಮಂದಿಯಲ್ಲಿ ಪಾಸಿಟಿವ್ ಕಂಡುಬಂದಿದೆ. ಇನ್ನು ಈ ಪೈಕಿ ಬಹುತೇಕರು ಕುಂದಾಪುರ ತಾಲೂಕಿನವರಾಗಿದ್ದಾರೆ.
ಮುಂಬೈನಿಂದ ಮರಳಿದವರಲ್ಲಿ ಸೋಂಕು:
ಇನ್ನು ಮಂಗಳವಾರದಂದು ಉಡುಪಿ ಜಿಲ್ಲೆಯಲ್ಲಿ ಪತ್ತೆಯಾದ ಎಲ್ಲಾ 150 ಮಂದಿ ಸೋಂಕಿತರು ಮುಂಬೈನಿಂದ ಬಂದವರು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ. ಇನ್ನು ಎರಡು ದಿನಗಳಲ್ಲಿ ಎರಡು ಸಾವಿರ ಮಂದಿಯನ್ನು ಪರೀಕ್ಷೆ ನಡೆಸಲಾಗಿದೆ. ಈ ಕಾರಣದಿಂದ ಒಂದೇ ದಿನ ೧೫೦ ಮಂದಿಯಲ್ಲಿ ಪಾಸಿಟಿವ್ ಕಂಡುಬಂದಿದೆ. ಇದರಿಂದ ಜಿಲ್ಲೆಯ ಜನತೆ ಆತಂಕ, ಗಾಬರಿ ಪಡುವ ಅಗತ್ಯವಿಲ್ಲ. ಎಲ್ಲರಿಗೂ ಚಿಕಿತ್ಸೆಗಾಗಿ ಆಸ್ಪತ್ರೆಯಲ್ಲಿ ಎಲ್ಲಾ ವ್ಯವಸ್ಥೆ ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಮಾಹಿತಿ ನೀಡಿದ್ದಾರೆ. ಇನ್ನು ಜಿಲ್ಲೆಯಲ್ಲಿ ಇಲ್ಲಿಯ ತನಕ 410 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದೆ.
ಯಾರ್ಯಾರಲ್ಲಿ ಸೋಂಕು ಪತ್ತೆ?
10 ವರ್ಷದೊಳಗಿನ ಮಕ್ಕಳು - 9 ಮಂದಿ
60 ವರ್ಷಕ್ಕಿಂತ ಮೇಲ್ಪಟ್ಟವರು - 3 ಮಂದಿ
ಪುರುಷರು - 120 ಮಂದಿ
ಮಹಿಳೆಯರು - 30 ಮಂದಿ