ಮಂಗಳೂರು, ಮಾ : 2019 ರ ಲೋಕಸಭಾ ಎಲೆಕ್ಷನ್ ಬಿಜೆಪಿಗೆ ಕೊನೆಯ ಚುನಾವಣೆ ಆಗಲಿದ್ದು ಈ ನಿಟ್ಟಿನಲ್ಲಿ ಮೋದಿಗೆ ಕೌಂಟ್ ಡೌನ್ ಪ್ರಾರಂಭವಾಗಿದೆ ಎಂದು ಸಚೇತಕ ಐವನ್ ಡಿ ಸೋಜಾ ವ್ಯಂಗ್ಯವಾಡಿದ್ದಾರೆ. ಮಾ. 26 ರ ಮಂಗಳವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಅವರು ಕಾಂಗ್ರೆಸ್ ಗೆ ಇದು ಕೊನೆಯ ಚುನಾವಣೆ ಎಂದು ಸಚಿವ ಸದಾನಂದ ಗೌಡ ಅವರ ಮಾತಿಗೆ ತಿರುಗೇಟು ನೀಡಿದರು. ಗೌಡರು ಈ ಮಾತನ್ನು ಬಾಯಿ ತಪ್ಪಿ ಹೇಳಿರಬೇಕು, 2019 ಲೋಕಸಭಾ ಚುನಾವಣೆ ಬಿಜೆಪಿಗೆ ಕೊನೆಯ ಚುನಾವಣೆ ಆಗಲಿದೆ ಎಂದರು. ಇದೇ ವೇಳೆ ಮುಂದಿನ ಲೋಕಸಭಾ ಚುನಾವಣೆಯಲ್ಲಿ, ಕಾಂಗ್ರೆಸ್ ಗೆಲುವು ಸಾಧಿಸುವ ವಿಶ್ವಾಸ ವ್ಯಕ್ತಪಡಿಸಿದರು, ಬಿಜೆಪಿ ಒಮ್ಮೆ ಅಸ್ತಿತ್ವಕ್ಕೆ ಬಂದರೆ ಪುನಃ ಗೆಲುವು ಸಾಧಿಸಲು ಸಾಧ್ಯವಾಗುವುದಿಲ್ಲ ಎಂದರು . ರಾಜ್ಯದಲ್ಲಿ ಈ ಬಾರಿ 140 ಸೀಟುಗಳನ್ನು ಕಾಂಗ್ರೆಸ್ ಪಡೆದುಕೊಳ್ಳುವ ವಿಶ್ವಾಸ ವ್ಯಕ್ತಪಡಿಸಿದ ಅವರು ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಕಾಂಗ್ರೆಸ್ ಮೇಲುಗೈ ಸಾಧಿಸಲಿದೆ ಎಂದರು.
ಮೋದಿಯ ಮನ್ ಕೀ ಬಾತ್ ನಿಂದ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ ಎನ್ನುವುದು ರಾಹುಲ್ ಕರಾವಳಿ ಭೇಟಿಯಲ್ಲಿ ತಿಳಿದಿದೆ. ಕರಾವಳಿಯಲ್ಲಿ ರಾಹುಲ್ ಗಾಂಧಿಯವರ ಭೇಟಿಯಿಂದ ಅದ್ಬುತ ಪ್ರತಿಕ್ರಿಯೆ ದೊರಕಿದೆ. ಕೋಮು ಗಲಭೆ ಸೃಷ್ಟಿಸಿ ಲಾಭ ಪಡೆಯುವ ಯೋಚನೆ ಬಿಜೆಪಿಗೆ ಫಲ ನೀಡುವುದಿಲ್ಲ. ಸಮಾನತೆಯ ಪಕ್ಷ ಕಾಂಗ್ರೆಸ್ ಎಂದು ಜನತೆಗೆ ತಿಳಿದಿದೆ ಜೈಲಿಗೆ ಹೋದ ಮುಖ್ಯಮಂತ್ರಿಗಳಿರುವ ಬಿಜೆಪಿ ಪಕ್ಷ ತನ್ನ ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ ಎಂದು ಹೇಳಿದರು.