ಮಂಗಳೂರು, ಜೂ. 03 (Daijiworld News/MB) : ಪಂಪ್ವೆಲ್ ಮೇಲ್ಸೇತುವೆ ಮೇಲೆ ವೀರ ಸಾವರ್ಕರ್ ಹೆಸರಿನಲ್ಲಿ ಬ್ಯಾನರ್ ಹಾಕಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ ಮಾಜಿ ಸಚಿವ ಯು ಟಿ ಖಾದರ್ ಅವರು ಆ ಬ್ಯಾನರ್ ಹಾಕಿದವರು ಹಾಗೂ ಪ್ರಿಂಟ್ ಮಾಡಿದವನನ್ನು ಬಂಧನ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಸೇತುವೆ ಊರುಗಳನ್ನು ಜೋಡಿಸುತ್ತದೆ, ಸೇತುವೆಗೆ ವಿಭಜಿಸುವ ಹೆಸರು ಇಡಬಾರದು. ಪಂಪ್ವಲ್ ಫ್ಲೈ ಓವರ್ ಗೆ ಮಹಾವೀರ ಸರ್ಕಲ್ ಎಂದು ಹೆಸರಿದೆ. ನಾನು ಯಲಹಂಕ ಸೇತುವೆ ಮೇಲೆ ಹೋದಾಗ ಸ್ವಾಮಿ ವಿವೇಕಾನಂದ ಹೆಸರು ಹೇಳುತ್ತೇನೆ ಎಂದು ಹೇಳಿದರು.
ಹಾಗೆಯೇ ಇಂದಿರಾ ಗಾಂಧಿ ಸರ್ಕಾರ ಸಾವರ್ಕರ್ ಸ್ಟ್ಯಾಂಪ್ ತಂದಿದ್ದರು. ಬಿಜೆಪಿ ಯಾಕೆ ಈಗ ಆ ಸ್ಟ್ಯಾಂಪ್ ಬಳಸುತ್ತಿಲ್ಲ ಎಂದು ಪ್ರಶ್ನಿಸಿದರು.
ಈ ಸಂದರ್ಭದಲ್ಲಿ ದ.ಕ ಜಿಲ್ಲೆಯಲ್ಲಿನ ಸರ್ಕಾರಿ ಆಸ್ಪತ್ರೆಯ ಕುರಿತಾಗಿ ಮಾತನಾಡಿದ ಅವರು, ದ.ಕ ಜಿಲ್ಲೆಗೆ ಈಗ ಸರ್ಕಾರಿ ಆಸ್ಪತ್ರೆಯಿಲ್ಲ. ಇದ್ದ ಒಂದು ಸರ್ಕಾರಿ ಆಸ್ಪತ್ರೆ ವೆನ್ಲಾಕ್ ಆದರೆ ಯಾವುದೇ ಮಾಹಿತಿ ನೀಡದೆ ವೆನ್ಲಾಕ್ ಆಸ್ಪತ್ರೆ ಖಾಲಿ ಮಾಡಿದ್ದಾರೆ. ಇದರಿಂದಾಗಿ ಖಾಸಗಿ ಆಸ್ಪತ್ರೆಗಳ ಬಿಲ್ ಭರಿಸಲಾಗದೆ ಜರನು ಬಡವರ್ಗದ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದರು.
ಬೆಂಗಳೂರಿನ ರೀತಿ ಮಂಗಳೂರಲ್ಲ. ಬೆಂಗಳೂರಿನಲ್ಲಿ 10 ಸರ್ಕಾರಿ ಆಸ್ಪತ್ರೆ ಇದೆ. ಮಂಗಳೂರಿನಲ್ಲಿ ಒಂದೇ ಸರ್ಕಾರಿ ಆಸ್ಪತ್ರೆ ಇರುವುದು. ಹಾಗಾಗಿ ವೆನ್ಲಾಕ್ನಲ್ಲಿ ಕೂಡಲೇ ಒಪಿಡಿ ಆರಂಭ ಮಾಡಬೇಕು. ದ. ಕ ಜಿಲ್ಲಾಡಳಿತ ಬಡವರ ಕಷ್ಟವನ್ನು ಅರಿಯಬೇಕು ಎಂದು ಒತ್ತಾಯಿಸಿದರು.