ಮಂಗಳೂರು, ಜೂ 03 (Daijiworld News/MSP): ಕೊರೊನಾದಿಂದ ಹೇರಲಾಗಿದ್ದ ಲಾಕ್ ಡೌನ್ ಕಾರಣದಿಂದ ತಡೆಯಾಗಿದ್ದ ಮಂಗಳೂರು – ಕಾಸರಗೋಡಿನ ಮಧ್ಯೆಯ ನಿತ್ಯ ಸಂಚಾರಕ್ಕೆ ಈಗ ಗ್ರೀನ್ ಸಿಗ್ನಲ್ ಸಿಕ್ಕಿದೆ. ಹಾಗೆಂದು ಎಲ್ಲರೂ ಸಿಕ್ಕ ಸಿಕ್ಕಂತೆ ಓಡಾಡುವಂತಿಲ್ಲ.
ಕಾಸರಗೋಡಿನಲ್ಲಿರುವ ಬಹಳಷ್ಟು ಗಡಿನಾಡ ಕನ್ನಡಿಗರು ಉದ್ಯೋಗ, ಶಿಕ್ಷಣ ನಿಮಿತ್ತ ದಿನನಿತ್ಯ ಮಂಗಳೂರಿಗೆ ಓಡಾಟ ನಡೆಸುತ್ತಾರೆ. ಇದೇ ಕಾರಣಕ್ಕೆ ಉಭಯ ಜಿಲ್ಲೆಗಳು ಒಂದಕ್ಕೊಂದು ಅವಲಂಭಿತವಾಗಿರುವುದರಿಂದ ಉದ್ಯೋಗಿಗಳು, ವಿದ್ಯಾರ್ಥಿಗಳು, ಆರೋಗ್ಯ ಸೇವಕರು ಮತ್ತು ಸರ್ಕಾರಿ ನೌಕರರು ಪಾಸ್ ಬಳಸಿ ಸಂಚರಿಸುವಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸಿಂಧೂ ರೂಪೇಶ್ ಆದೇಶ ನೀಡಿದ್ದಾರೆ.
ಅಗತ್ಯ ಓಡಾಟವಿರುವವರು Dkdpermit ವೆಬ್ ಸೈಟ್ ನಲ್ಲಿ ರಿಜಿಸ್ಟರ್ ಮಾಡಿ ಪಾಸ್ ಪಡೆಯಲು ಸೂಚಿಸಲಾಗಿದ್ದು, ಅನ್ಯ ಕಾರ್ಯಕ್ಕೆ ಪಾಸ್ ಬಳಸಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ.
ಪಾಸ್ ಗೆ ಅರ್ಜಿ ಸಲ್ಲಿಸಲು ಆಧಾರ್, ಉದ್ಯೋಗ ವಿಳಾಸ, ಮಾಹಿತಿ ಸಲ್ಲಿಸುವುದು ಕಡ್ಡಾಯವಾಗಿದ್ದು, ಪ್ರಯಾಣಿಕರು ನಿತ್ಯ ಥರ್ಮಲ್ ಸ್ಕ್ಯಾನ್ ಮತ್ತು ಆರೋಗ್ಯ ತಪಾಸಣೆ ಕಡ್ಡಾಯವಾಗಿರಲಿದೆ. ಅಲ್ಲದೆ ಈ ಪಾಸ್ ಪಡೆದುಕೊಂಡವರು ಜಿಲ್ಲೆಗೆ ಪ್ರವೇಶ ಪಡೆದ ಸಮಯ ಮತ್ತು ನಿರ್ಗಮನ ಸಮಯ ತಲಪಾಡಿ ಚೆಕ್ ಪೋಸ್ಟ್ ನಲ್ಲಿ ನಮೂದು ಬೇಕಾಗುತ್ತದೆ. ಒಂದು ವೇಳೆ ಪಾಸ್ ಪಡೆದಾತ ಜಿಲ್ಲೆಯಿಂದ ಬಂದು ಹೋಗದ ಸಮಯದ ಮಾಹಿತಿ ನೀಡದಿದ್ದರೆ ಅಂಥವರ ಮೇಲೆ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ.