ಮಂಗಳೂರು, ಜೂ 03 (DaijiworldNews/SM): ಇನ್ನು ಮುಂದಿನ ದಿನಗಳಲ್ಲಿ ಮನೆಯಲ್ಲಿರುವ ವ್ಯಕ್ತಿಗೆ ಕೊರೊನಾ ಸೋಂಕು ಇದ್ದಲ್ಲಿ ಕೇವಲ ಮನೆಯನ್ನು ಮಾತ್ರ ಸೀಲ್ ಡೌನ್ ಮಾಡಲಾಗುವುದೇ ಹೊರತು, ಸುತ್ತಮುತ್ತಲಿನ ಪ್ರದೇಶವನ್ನಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ದ.ಕ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆಯಲ್ಲಿ ಮಾತನಾಡಿದ ಅವರು, ಇನ್ಮುಂದೆ ಕಂಟೋನ್ಮೆಂಟ್ ಝೋನ್ ಎಂಬುವುದೇ ಇರೋದಿಲ್ಲ. ಯಾವ ಮನೆಯಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗುತ್ತದೆ, ಕೇವಲ ಆ ಮನೆಯನ್ನು 14 ದಿನಗಳ ಕಾಲ ಸೀಲ್ ಡೌನ್ ಮಾಡುತ್ತೇವೆ ಎಂದಿದ್ದಾರೆ.
ಈ ಹಿಂದೆ ಸೋಂಕು ಪತ್ತೆಯಾಗುತ್ತಿದ್ದ ಪ್ರದೇಶದ ಸುತ್ತಮುತ್ತಲಿನ 100 ಮೀಟರ್ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗುತ್ತಿತ್ತು. ಆ ಪ್ರದೇಶದಲ್ಲಿನ ಜನರ ಸಂಚಾರಕ್ಕೆ, ಓಡಾಟಕ್ಕೆ ನಿಷೇಧ ವಿಧಿಸಲಾಗುತ್ತಿತ್ತು. ಅಲ್ಲದೆ, 5 ಕಿ.ಮೀ. ವ್ಯಾಪ್ತಿಯ ಪ್ರದೇಶವನ್ನು ಬಫರ್ ಝೋನ್ ಎಂದು ಗುರುತಿಸಲಾಗುತ್ತಿತ್ತು. ಆದರೆ, ಇನ್ಮುಂದೆ ಅಂತಹ ನಿರ್ಧಾರ ಇರುವುದಿಲ್ಲ ಎಂದಿದ್ದಾರೆ.