ಜೂ 03 (DaijiworldNews/SM): ಇನ್ನು ಮುಂದೆ ಮಹಾರಾಷ್ಟ್ರದಿಂದ ಆಗಮಿಸುವವರಿಗೆ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ಹಾಗೂ 7 ದಿನಗಳ ಕಾಲ ಹೋಂ ಕ್ವಾರಂಟೈನ್ ವಿಧಿಸಲಾಗುವುದೆಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ದ.ಕ. ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಈ ಹಿಂದೆ ಹೊರ ರಾಜ್ಯಗಳಿಂದ ಆಗಮಿಸುವವರಿಗೆ ಸಾಂಸ್ಥಿಕ ಕ್ವಾರಂಟೈನ್ ಗೆ ವ್ಯವಸ್ಥೆ ಮಾಡಲಾಗುತ್ತಿತ್ತು. ಆದರೆ, ಇನ್ನು ಮುಂದಿನ ದಿನಗಳಲ್ಲಿ ಮಹಾರಾಷ್ಟ್ರದಿಂದ ಆಗಮಿಸುವವರಿಗೆ ಮಾತ್ರವೇ 7 ದಿನಗಳ ಸಾಂಸ್ಥಿಕ ಕ್ವಾರಂಟೈನ್ ವಿಧಿಸಲಾಗುವುದು. ಉಳಿದಂತೆ ಇತರ ರಾಜ್ಯಗಳಿಂದ ಆಗಮಿಸುವರಿಗೆ ಹೋಂ ಕ್ವಾರಂಟೈನ್ ಮಾತ್ರವೇ ಇರಲಿದೆ ಎಂದು ಅವರು ತಿಳಿಸಿದ್ದಾರೆ.
ಕೊರೊನಾ ಲಕ್ಷಣಗಳಿದ್ದಲ್ಲಿ ಮಾತ್ರವೇ ಕೋವಿಡ್ ಪರೀಕ್ಷೆ:
ಈಗಾಗಲೇ ಮಹಾರಾಷ್ಟ್ರದಿಂದ ಬಂದ ಎಲ್ಲರನ್ನೂ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಆದರೆ ಇನ್ನು ಮುಂದಿನ ದಿನಗಳಲ್ಲಿ ಸೋಂಕು ಲಕ್ಷಣಗಳಿದ್ದಲ್ಲಿ ಮಾತ್ರ ಕೊರೊನಾ ಪರೀಕ್ಷೆ ನಡೆಸಲಾಗುವುದು. ಅವಶ್ಯಕತೆ ಇದ್ದವರಿಗೆ ಮಾತ್ರ ಕೊರೊನಾ ಪರೀಕ್ಷೆ ನಡೆಯಲಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ತಿಳಿಸಿದ್ದಾರೆ.
ಮಹಾರಾಷ್ಟ್ರ ಹೊರತುಪಡಿಸಿ ಇತರ ರಾಜ್ಯಗಳಿಂದ ಬಂದವರು ಅವರವರ ಮನೆಗಳಲ್ಲೇ ಕ್ವಾರಂಟೈನ್ ಆಗಬೇಕು. ಹೋಂ ಕ್ವಾರಂಟೈನ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ತಪ್ಪಿದ್ದಲ್ಲಿ ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದೆಂದು ಸಚಿವರು ಎಚ್ಚರಿಕೆ ನೀಡಿದ್ದಾರೆ.