ಉಳ್ಳಾಲ, ಜೂ 03 (DaijiworldNews/SM): ಮಂಗಳವಾರ ರಾತ್ರಿ ಪಂಪ್ ವೆಲ್ ಮೇಲ್ಸೇತುವೆಗೆ ಅನಾಮಿಕರು ವೀರ ಸಾವರ್ಕರ್ ಮೇಲ್ಸೇತುವೆ ಪಂಪ್ ವೆಲ್ ಎಂಬ ಬ್ಯಾನರ್ ಅಳವಡಿಸಿದ್ದ ಬೆನ್ನಲ್ಲೇ ತೊಕ್ಕೊಟ್ಟು ಫ್ಲೈಓವರ್ ಗೆ ವೀರ ರಾಣಿ ಅಬ್ಬಕ್ಕ ಹೆಸರಿಡಲಾಗಿದೆ.
ಪ್ಲೈಓವರ್ ತಡೆಗೋಡೆಯಲ್ಲಿ ಅಪರಿಚಿತರು ವೀರರಾಣಿ ಅಬ್ಬಕ ಮೇಲ್ಸೇತುವೆ ಎಂದು ಬರೆದಿದ್ದಾರೆ. ಯಾರೋ ಅಪರಿಚಿತ ಕಿಡಿಗೇಡಿಗಳು ಈ ಕೃತ್ಯ ನಡೆಸಿದ್ದಾರೆ. ರಾತ್ರಿ ವೇಳೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ವೀರ ರಾಣಿ ಅಬ್ಬಕ್ಕ ಎಂಬ ಹೆಸರನ್ನು ಬರೆದು ಪರಾರಿಯಾಗಿದ್ದಾರೆ.
ಪಂಪ್ ವೆಲ್ ಹಾಗೂ ತೊಕ್ಕೊಟ್ಟು ಮೆಲ್ಸೇತುವೆಗಳಿಗೆ ಹೆಸರಿಡುವ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆಗಳು ನಡೆಯುತ್ತಿರುವ ಸಂದರ್ಭದಲ್ಲೇ ಇಂತಹ ಘಟನೆಗಳು ನಡೆಯುತ್ತಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿಸಿದೆ.
ಇನ್ನು ರಾತ್ರೋರಾತ್ರಿ ಕಿಡಿಗೇಡಿಗಳು ಇಂತಹ ಕೃತ್ಯಗಳನ್ನು ಎಸಗುತ್ತಿರುವುದಕ್ಕೆ ನಾಗರಿಕ ಸಮಾಜ ಖಂಡನೆ ವ್ಯಕ್ತಪಡಿಸುತ್ತಿದೆ. ಅಲ್ಲದೆ, ಇಂತಹ ಕೃತ್ಯಗಳ ಮೂಲಕ ಮತ್ತೆ ಕರಾವಳಿಯಲ್ಲಿ ಪರಸ್ಪರ ಭಿನ್ನ ಮತಕ್ಕೆ ಕಾರಣೀಕರ್ತರಾಗುವವರಿಗೆ ಸೂಕ್ತ ಶಿಕ್ಷೆ ನೀಡಬೇಕೆಂಬ ಒತ್ತಾಯಗಳು ಕೇಳಿಬರುತ್ತಿವೆ.
ಇನ್ನು ಜೂನ್ 2ರ ಮಂಗಳವಾರದಂದು ಪಂಪ್ವೆಲ್ ಮೇಲ್ಸೇತುವೆಯಲ್ಲಿ ೮ ಗಂಟೆಗೆ ವೀರ ಸಾವರ್ಕರ್ ಹೆಸರಿನ ಬ್ಯಾನರ್ ಅಳವಡಿಸಿದ್ದರು. ಆದರೆ, ಅದಾದ ಒಂದೇ ಗಂಟೆಯೊಳಗೆ ಅಲ್ಲಿದ್ದ ಬ್ಯಾನರ್ ಮಾಯವಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.