ಮಂಗಳೂರು, ಮಾ 27 : ನಗರದ ಜೆಪ್ಪು ಮಹಾಕಾಳಿ ಪಡ್ಪು ಸಮೀಪ ಬೈಕ್ನಲ್ಲಿ ಹೋಗುತ್ತಿದ್ದಾಗ ಮೆಣಸಿನ ಪುಡಿ ಎರಚಿ 54 ಗ್ರಾಂ ಚಿನ್ನಾಭರಣ ದರೋಡೆ ಮಾಡಿದ್ದಾರೆಂದು ಕಥೆ ಸೃಷ್ಟಿಸಿದ್ದ ಆರೋಪಿಯನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹರೀಶ್ ಆಚಾರ್ಯ ಬಂಧಿತ ಆರೋಪಿ. ಮಾರ್ಚ್ 21ರಂದು ನಗರದ ರಥಬೀದಿಯಲ್ಲಿ ಚಿನ್ನದ ಕೆಲಸ ಮಾಡಿ ಚಿನ್ನಾಭರಣದೊಂದಿಗೆ ತೊಕ್ಕೊಟ್ಟು ಜುವೆಲ್ಲರಿಗೆ ಕೊಡಲು ಹೋಗುವಾಗ ಮಹಾಕಾಳಿ ಪಡ್ಪು ಬಳಿ ಅಪರಿಚಿತರು ಅಡ್ಡ ಹಾಕಿ ಕಣ್ಣಿಗೆ ಮೆಣಸಿನ ಹುಡಿ ಎರಚಿ ಸುಮಾರು 1,35,000 ರೂ. ಮೌಲ್ಯದ 54 ಗ್ರಾಂ ಚಿನ್ನದ ಗಟ್ಟಿಯನ್ನು ದರೋಡೆ ಮಾಡಿಕೊಂಡು ಹೋಗಿದ್ದಾರೆಂದು ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದ. ಜೊತೆಗೆ ತನ್ನ ಮನೆಯಿಂದ 1 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ ಎಂದು ಉಳ್ಳಾಲ ಠಾಣೆಯಲ್ಲೂ ದೂರು ನೀಡಿದ್ದ. ಈ ಎರಡೂ ಪ್ರಕರಣದ ಬಗ್ಗೆ ಆರೋಪಿ ಹರೀಶ್ ಆಚಾರ್ಯನನ್ನು ವಿಚಾರಿಸಿದಾಗ ಪ್ರಕರಣ ಬಯಲಿಗೆ ಬಂದಿದೆ. ತಾನು ನಷ್ಟದಲ್ಲಿದ್ದ ಕಾರಣ ಸುಳ್ಳು ಕಥೆಯನ್ನು ಸೃಷ್ಟಿಸಿ ತಾನು ಒಡವೆಗಳನ್ನು ಕಳವು ಮಾಡಿದ್ದಾಗಿ ಒಪ್ಪಿಕೊಂಡಿದ್ದಾನೆ.