ಕೋಟ, ಜೂ 04 (Daijiworld News/MSP): ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ಓರ್ವರಲ್ಲಿ ಕೊರೊನಾ ಸೋಂಕು ದೃಢಪಟ್ಟ ಬಗ್ಗೆ ಸಂಶಯ ವ್ಯಕ್ತವಾಗಿ ಮರು ಪರೀಕ್ಷೆಗೆ ಅವರ ಗಂಟಲು ದ್ರವವನ್ನು ಕಳುಹಿಸಿಕೊಡಲಾಗಿತ್ತು.
ಇದೀಗ ವರದಿ ಬಂದಿದ್ದು ಮಹಿಳಾ ಸಿಬ್ಬಂದಿಯ ವರದಿಯಲ್ಲಿ ಕೊರೊನಾ ನೆಗೆಟಿವ್ ಎಂದು ಬಂದಿದೆ. ಮೇ.31 ರಂದು ಇವರ ಪ್ರಾಥಮಿಕ ವರದಿಯಲ್ಲಿ ಕೊರೊನಾ ಪಾಸಿಟಿವ್ ಎಂದು ಬಂದಿತ್ತು. ಈ ವರದಿ ಬಗ್ಗೆ ಸಂಶಯ ವ್ಯಕ್ತವಾದ ಹಿನ್ನಲೆಯಲ್ಲಿ ಸೋಮವಾರ ಮರು ಪರೀಕ್ಷೆಗೆ ಕಳುಹಿಸಲಾಗಿತ್ತು.
ಇದೀಗ ಮಹಿಳಾ ಪೊಲೀಸ್ ಕಾನ್ಸ್ಟೇಬಲ್ ವರದಿ ನೆಗೆಟಿವ್ ಬಂದ ಹಿನ್ನಲೆಯಲ್ಲಿ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮುಂಜಾಗ್ರತಾ ಕ್ರಮವಾಗಿ ಮುಂದಿನ ಏಳು ದಿನಗಳ ಕಾಲ ಹೋಂ ಕ್ವಾರಂಟೈನ್ ಗೆ ಒಳಪಡಿಸಲಾಗಿದೆ.
ಮೇ.31 ರಂದು ಪಾಸಿಟಿವ್ ಬಂದ ಕಾರಣ ಅವರು ವಾಸವಾಗಿದ್ದ ಕೋಟತಟ್ಟು ಮನೆಯ 100 ಮೀಟರ್ ಪ್ರದೇಶವನ್ನು ಸೀಲ್ ಡೌನ್ ಮಾಡಲಾಗಿತ್ತು.