ಮಂಗಳೂರು, ಜೂ. 04 (Daijiworld News/MB) : ಕೇಂದ್ರ ಸರ್ಕಾರ ಭಾವನಾತ್ಮಕವಾಗಿ ಜನರನ್ನು ವಂಚನೆ ಮಾಡ ಹೊರಟ್ಟಿದ್ದು, ಸರ್ಕಾರಿ ಸ್ವಾಮ್ಯ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಮುಂದಾಗಿದ್ದಾರೆ. ಜನರನ್ನು ಲೂಟಿ ಮಾಡಲು ಹೊರಟಿರುವುದೇ ಮೋದಿ ಸರಕಾರ ಎರಡನೇ ಅವಧಿಯ ಸಾಧನೆ ಎಂದು ಮಾಜಿ ಸಚಿವ, ಕಾಂಗ್ರೆಸ್ ನಾಯಕ ರಮನಾಥ್ ರೈ ಕೇಂದ್ರ ಸರ್ಕಾರದ ವಿರುದ್ದ ಕಿಡಿ ಕಾರಿದ್ದಾರೆ.
ಈ ಬಗ್ಗೆ ನಗರದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರವು ವಿಮಾನ ನಿಲ್ದಾಣ, ಕಲ್ಲಿದ್ದಲು ನಿಗಮಗಳು, ಬಿಎಸ್ಎನ್ಎಲ್ ಇನ್ನಿತರ ಕಂಪನಿಗಳನ್ನು ಖಾಸಗೀಕರಣ ಮಾಡಲು ಮುಂದಾಗಿದೆ. ಮೆಸ್ಕಾಂ ಖಾಸಗೀಕರಣ ಮಾಡಲು ಹೊರಟಿರುವುದು ಸರಕಾರ ಸಾಧನೆಯೇ..? ಎಂದು ಪ್ರಶ್ನಿಸಿದರು.
ಖಾಸಗಿ ಕಂಪನಿಯನ್ನು ಬದುಕಿಸಲು ಸರಕಾರಿ ಕಂಪನಿ ಮುಚ್ಚಲು ಕೇಂದ್ರ ಸರ್ಕಾರ ಮುಂದಾಗಿದ್ದು ಜಿಯೋ ಕಂಪನಿಯನ್ನು ಬ್ರ್ಯಾಂಡ್ ಅಂಬಾಸಿಡರ್ ಮಾಡಲು ಮೋದಿ ಹೊರಟಿದ್ದಾರೆ ಎಂದು ದೂರಿದ ಅವರು ಸರ್ಕಾರವು ಭಾವನಾತ್ಮಕವಾಗಿ ಜನರನ್ನು ವಂಚಿಸಲು ಹೊರಟಿದ್ದು ಸ್ವಾತಂತ್ರ್ಯ ಹೋರಾಟಗಾರರ ಹೆಸರಿನ ಮೂಲಕ ನೆಹರೂ ಕುಟುಂಬದ ಟಾರ್ಗೆಟ್ ಮಾಡುತ್ತಿದೆ ಎಂದು ಆರೋಪಿಸಿದರು.
ಮೋದಿಗೆ ಎರಡನೇ ಅವಧಿಯಲ್ಲೂ ಕಪ್ಪು ಹಣ ಹೊರತರಲು ಆಗಿಲ್ಲ. ಬದಲಾಗಿ ಗ್ಯಾಸ್, ಪೆಟ್ರೋಲಿಯಂನಲ್ಲಿ ಲೂಟಿ ಮಾಡಲು ಸರ್ಕಾರ ಮುಂದಾಗಿದೆ. ಮೋದಿ ಸರಕಾರ ಎರಡನೇ ಅವಧಿಯ ಸಾಧನೆ ಇದೇನಾ..? ಎಂದು ಮಾಜಿ ಸಚಿವ ರಮಾನಾಥ ರೈ ಪ್ರಶ್ನಿಸಿದರು.
ಇನ್ನು ವಿದ್ಯುತ್ ಬಿಲ್ ವಿಚಾರವಾಗಿ ಮಾತನಾಡಿದ ಅವರು, ವಿದ್ಯುತ್ ಬಿಲ್ ಸಮಸ್ಯೆ ಸರಿಪಡಿಸುವಲ್ಲಿ ಸರ್ಕಾರದ ಮೊಂಡುತನ ತೋರುತ್ತಿದ್ದು ಇಂತಹ ವರ್ತನೆ ವಿರುದ್ಧ ಹೋರಾಟ ಅನಿವಾರ್ಯವಾಗಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿದ್ಯುತ್ ಬಿಲ್ ಕುರಿತು ಗೊಂದಲವನ್ನು ಸರ್ಕಾರ ಇನ್ನೂ ಸರಿಪಡಿಸಿಲ್ಲ. ಎರಡು ತಿಂಗಳ ಬಿಲ್ ಒಂದೇ ಬಿಲ್ಗೆ ಸೇರಿಸಿದ್ದರಿಂದ ಬಿಲ್ನಲ್ಲಿ ಹೆಚ್ಚಳವಾಗಿದೆ. ಬಿಲ್ ವಿಂಗಡನೆ ಮಾಡಿ ಜನರಿಗೆ ನೀಡಬೇಕಿತ್ತು. ಮುಖ್ಯಮಂತ್ರಿಯವರ ಮಾತನ್ನು ಮೆಸ್ಕಾಂನವರೂ ಕೇಳುತ್ತಿಲ್ಲ. ಕೊರೊನಾ ಲಾಕ್ಡೌನ್ ಕಾರಣದಿಂದಾಗಿ ಸಂಕಷ್ಟದಲ್ಲಿರುವ ಸಮಯದಲ್ಲಿ ಜನರಿಗೆ ನೋವಿನ ಮೇಲೆ ಬರೆ ಎಳೆದಂತಾಗಿದೆ ಎಂದು ಹೇಳಿದರು.