ಕಾರ್ಕಳ, ಜೂ 04 (Daijiworld News/MSP): ಒಂದೆಡೆ ಉಡುಪಿಯಲ್ಲಿ ಕೋವಿಡ್ - ೧೯ ಪಾಸಿಟಿವ್ ಕೇಸ್ ಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಇದೇ ವೇಳೆ ಇನ್ನೊಂದೆಡೆ ಕ್ವಾರಂಟೈನ್ ಕೇಂದ್ರದಲ್ಲೇ ಸ್ಥಳೀಯ ಜನಪ್ರತಿನಿಧಿಗಳು ಬರ್ತ್ ಡೇ ಪಾರ್ಟಿ ಮಾಡಿದ್ದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಸಾಣೂರು ಪ್ರಕೃತಿ ಆಂಗ್ಲಮಾದ್ಯಮ ಶಾಲೆಯಲ್ಲಿರುವ ಕ್ವಾರಂಟೈನ್ ಕೇಂದ್ರದಲ್ಲಿ ಈ ಪಾರ್ಟಿ ಆಯೋಜನೆಗೊಂಡಿತ್ತು. ಇದರಲ್ಲಿ ಕಾರ್ಕಳ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಕರುಣಾಕರ ಕೋಟ್ಯಾನ್, ಕಾಂತಾವರ ಪಂಚಾಯತ್ ಅಧ್ಯಕ್ಷ ರಾಜೇಶ್ ಕೋಟ್ಯಾನ್, ಯುವ ಮೋರ್ಚಾ ಕಾರ್ಯದರ್ಶಿ ನವೀನ್ ಕಾಂತಾವರ ಕ್ವಾರಂಟೈನ್ ಬರ್ತ್ ಡೇ ಪಾರ್ಟಿಯಲ್ಲಿ ಭಾಗಿಯಾಗಿದ್ದಾರೆ.
ಮಹಾರಾಷ್ಟ್ರದಿಂದ ಬಂದ ಅನೇಕರಿಗೆ ಸೋಂಕು ತಗಲುತ್ತಿರುವ ಈ ಹೊತ್ತಿನಲ್ಲಿ, ಅವರು ಕ್ವಾರಂಟೈನ್ ಆಗಿರುವ ಕೇಂದ್ರದಲ್ಲಿ ಹೀಗೆ ಒಟ್ಟು ಸೇರಿ ಹುಟ್ಟು ಹಬ್ಬ ಆಚರಣೆ ಮಾಡಿದ್ದು ಎಷ್ಟು ಸರಿ ಎಂದು ಪ್ರಜ್ಞಾವಂತ ಜನ ಪ್ರಶ್ನಿಸತೊಡಗಿದ್ದಾರೆ
ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್ ಆಗ್ರಹಿಸಿದ್ದಾರೆ