ಮಂಗಳೂರು, ಜೂ 05 (Daijiworld News/MSP) : ಮುಂಗಾರು ಮಳೆ ನಿರೀಕ್ಷೆಯಲ್ಲಿದ್ದ ರೈತ ಸಮುದಾಯಕ್ಕೆ ಹವಾಮಾನ ಇಲಾಖೆ ಸಿಹಿಸುದ್ದಿ ನೀಡಿದ್ದು, ಗುರುವಾರ ಮಧ್ಯಾಹ್ನ ಕರ್ನಾಟಕದ ಕರಾವಳಿ,ಮಲೆನಾಡು ಜಿಲ್ಲೆಗಳಿಗೆ ಮುಂಗಾರು ಆಗಮನವಾಗಿದ್ದು, ಪರಿಣಾಮವಾಗಿ ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗುತ್ತಿದೆ.
ಈ ಬಾರಿ ನಿಗದಿತ ವೇಳಾಪಟ್ಟಿಯಂತೆ ಮನ್ಸೂನ್ ಆಗಮಿಸಿದ್ದು ಇದಕ್ಕೆ ನಿಸರ್ಗ ಚಂಡಮಾರುತ ಮುಂಗಾರಿನ ಕ್ಷಿಪ್ರ ಚಲನೆಗೆ ಪೂರಕವಾಗಿತ್ತು.ಭಾರತೀಯ ಹವಾಮಾನ ಇಲಾಖೆಯು ಕರಾವಳಿ ಭಾಗದಲ್ಲಿ ಯಲ್ಲೋ ಅಲರ್ಟ್ ಘೋಷಣೆ ಮಾಡಿದೆ. ಜೂನ್ 7 ರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದ್ದು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕರ್ನಾಟಕ, ಶಿವಮೊಗ್ಗ ಜಿಲ್ಲೆಗಳಲ್ಲಿ ಗುರುವಾರವೂ ಮಳೆಯಾಗಿದೆ.
ಮುಂದಿನ ಎರಡು ದಿನಗಳಲ್ಲಿ ಕರಾವಳಿ ಭಾಗದಲ್ಲಿ ಉತ್ತಮ ಮಳೆಯಾಗಲಿದ್ದು ಜತೆಗೆ ಗಾಳಿ ಮತ್ತು ಗುಡುಗು ಕೂಡಾ ಇರಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.