ಮಂಗಳೂರು ಜೂ 05 (Daijiworld News/MSP) : ಕೊರೊನಾ ನಿಯಂತ್ರಣಕ್ಕಾಗಿ ಹೇರಲಾಗಿದ್ದ ಲಾಕ್ಡೌನ್ ಸಮಯದಲ್ಲಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿ ಕಡಿಮೆ ದರದಲ್ಲಿ ದೊರೆತ ಕಾರಣ ಮಂಗಳೂರಿನ ಪೆರ್ಮುದೆ ಹಾಗೂ ಉಡುಪಿಯ ಪಾದೂರು ಹಾಗೂ ಆಂಧ್ರಪ್ರದೇಶದ ವಿಶಾಖಪಟ್ಟಣದ ಭೂಗತ ಕಚ್ಚಾ ತೈಲ ಸಂಗ್ರಹಾಗಾರದಲ್ಲಿ ತೈಲ ಭರ್ತಿ ಮಾಡಿದ ಪರಿಣಾಮ ಒಟ್ಟು 5 ಸಾವಿರ ಕೋ ರೂ. ವಿದೇಶಿ ವಿನಿಮಯ ಉಳಿತಾಯವಾಗಿದೆ ಎಂದು ಪೆಟ್ರೋಲಿಯಂ ಸಚಿವಾಲಯ ಟ್ವೀಟ್ ನಲ್ಲಿ ತಿಳಿಸಿದೆ.
ಕೋವಿಡ್ 19ನಿಂದಾಗಿ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರೀ ಇಳಿಕೆ ಕಂಡಿತ್ತು. ಈ ಸಂದರ್ಭದಲ್ಲಿ ಭಾರತ ಕಡಿಮೆ ದರದಲ್ಲಿ ತೈಲವನ್ನು ಖರೀದಿಸಿ ಈ ಸಂಗ್ರಹಾಗಾರದಲ್ಲಿ ಸಂಗ್ರಹಿಸಿ ಭರ್ತಿ ಮಾಡಿದೆ. ಕೋವಿಡ್19 ಬರುವುದಕ್ಕೆ ಮೊದಲು ಮಂಗಳೂರು, ಪಾದೂರು ಅರ್ಧ ತುಂಬಿದ್ದರೆ, ವಿಶಾಖಪಟ್ಟಣದಲ್ಲಿ ಸ್ವಲ್ಪ ಜಾಗ ಉಳಿದಿತ್ತು. ಈಗ ಸರ್ಕಾರ ಸೌದಿ ಅರೇಬಿಯಾ, ಯುಎಇ ಮತ್ತು ಇರಾಕ್ ನಿಂದ ತೈಲವನ್ನು ಖರೀದಿಸಿ ಭರ್ತಿ ಮಾಡಿದೆ.
ಭಾರತದ ತೈಲ ಸಂಗ್ರಹ ಏನೇನು ಸಾಲದು. ಒಟ್ಟು 90 ದಿನಗಳ ಬಳಕೆಗೆ ಆಗುವಷ್ಟು 13.32 ಮೆಟ್ರಿಕ್ ಟನ್ ತೈಲ ಸಂಗ್ರಹ ಅಗತ್ಯತೆ ಭಾರತಕ್ಕಿದೆ. ಇಂಡಿಯನ್ ಸ್ಟ್ರಾಟೆಜಿಕ್ ಪೆಟ್ರೋಲಿಯಂ ರಿಸರ್ವ್ ಲಿಮಿಟೆಡ್ (ಐಎಸ್ಪಿಆರ್ ಎಲ್) ಮಂಗಳೂರು, ಉಡುಪಿ ಬಳಿಯ ಪಾದೂರು, ವಿಶಾಖಪಟ್ಟಣಂನಲ್ಲಿ ಭೂಗತ ತೈಲ ಸಂಗ್ರಹಣ ಘಟಕಗಳನ್ನು ಸ್ಥಾಪಿಸಿದೆ.