ಮಂಗಳೂರು, ಜೂ 05 (Daijiworld News/MSP): ಕೋವಿಡ್ ಚಿಕಿತ್ಸಾ ಆಸ್ಪತ್ರೆಯಾಗಿ ಬದಲಾಗಿದ್ದ ನಗರದ ವೆನ್ಲಾಕ್ ಸರಕಾರಿ ಆಸ್ಪತ್ರೆಯೂ ಇತರ ರೋಗಿಗಳಿಗೆ ಚಿಕಿತ್ಸೆಗಳಿಗಾಗಿ ತೆರೆಯಲಿದ್ದು, ಇನ್ನು ಮೂರ್ನಾಲ್ಕು ದಿನಗಳೊಳಗೆ ಹೊರರೋಗಿ ವಿಭಾಗ ಕಾರ್ಯಾರಂಭ ಮಾಡಲಿದೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾದ ಹಿನ್ನೆಲೆಯಲ್ಲಿ ಮಾ. 26ರಂದು ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆ ಯನ್ನಾಗಿ ಘೋಷಿಸಲಾಗಿತ್ತು. ಅಲ್ಲಿ ಒಳ ರೋಗಿಗಳಾಗಿ ದಾಖಲಾಗಿದ್ದವರನ್ನು ಖಾಸಗಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿತ್ತು.
ಸುಮಾರು ಎರಡೂವರೆ ತಿಂಗಳ ಕಾಲ ವೆನ್ಲಾಕ್ ಆಸ್ಪತ್ರೆಯಲ್ಲಿ ಇತರ ರೋಗಗಳಿಗೆ ಚಿಕಿತ್ಸೆ ಲಭಿಸದ ಕಾರಣ ಹಲವಾರು ರೋಗಿಗಳೂ ಸಾಕಷ್ಟು ತೊಂದರೆ ಅನುಭವಿಸಿದ್ದರು. ಈಗ ಹಂತಹಂತವಾಗಿ ಇತರ ರೋಗಿ ಗಳ ಚಿಕಿತ್ಸೆಗೆ ತೆರೆಯಲು ಜಿಲ್ಲಾಡಳಿತ ನಿರ್ಧರಿಸಿದೆ.
ಸುತ್ತಮುತ್ತ ಜಿಲ್ಲೆಗಳಿಂದ ದಿನವೊಂದಕ್ಕೆ ಕನಿಷ್ಠ 2,000 ಮಂದಿ ಹೊರರೋಗಿಗಳು ಚಿಕಿತ್ಸೆಗಾಗಿ ನಗರದ ವೆನ್ಲಾಕ್ ಗೆ ಆಗಮಿಸುತ್ತಿದ್ದರು. ಹೀಗಾಗಿ ಆರಂಭಿಕ ಹಂತದಲ್ಲಿ ಒಳರೋಗಿಗಳಿಗೆ ಅವಕಾಶ ಇರುವುದಿಲ್ಲ. ಹಂತ ಹಂತವಾಗಿ ಇತರ ಚಿಕಿತ್ಸೆಗಳನ್ನೂ ಆರಂಭಿಸಲು ಯೋಚಿಸಲಾಗುತ್ತಿದೆ.