ಉಡುಪಿ, ಜೂ 05 (Daijiworld News/MSP): "ಬೆಂಗಳೂರಿನ ಸ್ಲಂಗಳಲ್ಲಿ ತಬ್ಲಿಘಿಗಳು ಕೊರೊನಾ ಹರಡುತಿದ್ದಾರೆ" ಎಂದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಂಜೆ ಹೇಳಿದ್ದಾರೆ.
ಉಡುಪಿಯಲ್ಲಿ ಮಾತನಾಡಿದ ಅವರು "ಬೆಂಗಳೂರಿನ ಸ್ಲಂ ಗಳಲ್ಲಿ ತಬ್ಲಿಘಿಗಳು ಕೊರೊನಾ ಹರಡುವ ಕೆಲಸವನ್ನು ಮಾಡುತಿದ್ದಾರೆ. ಪಾದರಾಯನಪುರ ಮತ್ತು ಸಿದ್ದೀಕ್ ಲೇ ಔಟ್ ನಲ್ಲಿ ಕೂಡಾ ಇದನ್ನೇ ಮಾಡಿರುವುದು. ಉದ್ದೇಶಪೂರ್ವಕವಾಗಿ ತಬ್ಲಿಘಿಗಳು ದೇಶದಲ್ಲಿ ಕೊರೊನಾ ಹರಡಲು ಷಡ್ಯಂತ್ರವನ್ನು ಮಾಡಿದ್ದಾರೆ" ಎಂದು ಆರೋಪಿಸಿದ್ದಾರೆ.
"ಕೊರೊನಾ ಹರಡುವ ಬಗ್ಗೆ ತನಿಖೆ ಮಾಡಿ ಅಂತಹವರ ವಿರುದ್ದ ದೇಶದ್ರೋಹದ ಪ್ರಕರಣವನ್ನು ದಾಖಲಿಸಬೇಕು. ಭಾರತದ ಅನ್ನ ನೀರು ಗಾಳಿ ಸೇವಿಸಿ ಭಾರತದ ವಿರುದ್ದ ಸಮರ ಸಾರುತ್ತಿದ್ದಾರೆ. ಅವರು ಕ್ಷಮೆಗೆ ಅರ್ಹರಲ್ಲ. ಇದಕ್ಕೆ ಕುಮ್ಮಕ್ಕು ನೀಡಿದ ಜನಪ್ರತಿನಿಧಿ ಮೇಲೆ ಕೂಡಾ ಕಠಿಣ ಕ್ರಮ ಜರಗಿಸಬೇಕು. ಸಿದ್ದಿಕ್ ಲೇಔಟ್ ನಲ್ಲಿ ಆಶಾ ಕಾರ್ಯಕರ್ತರಿಗೆ ಹಲ್ಲೆ ಮಾಡುವ ಮುನ್ನ ಅಲ್ಲಿನ ಮಸೀದಿಯಲ್ಲಿ ಪ್ರಾರ್ಥನೆ ಮಾಡುತಿದ್ದರು ತದನಂತರ ಅರ್ಥವಾಗದ ಭಾಷೆಯಲ್ಲಿ ಅವರು ಮಾತನಾಡಿಕೊಂಡು ತಕ್ಷಣವೇ ಸ್ಥಳದಲ್ಲಿ ಜನ ಜಮಾವಣೆಗೊಂಡು ಆಶಾ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದಾರೆ. ಇದರ ಹಿಂದೆ ಒಂದು ದುರುದ್ದೇಶ ಇದೆ" ಎಂದು ಸಂಸದರು ಹೇಳಿಕೆ ನೀಡಿದ್ದಾರೆ.